ಹುಬ್ಬಳ್ಳಿ: ನಿಯಮ ಉಲ್ಲಂಘಿಸಿ ಓಡಾಡುವ ವಾಹನ ಸವಾರರಿಗೆ ಇಲ್ಲೊಬ್ಬ ಬಿಆರ್‌ಟಿಎಸ್ ಬಸ್ ಚಾಲಕ ಸರಿಯಾದ ಪಾಠ ಕಲಿಸಿದ್ದಾರೆ. ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅಡ್ಡಾದಿಡ್ಡಿಯಾಗಿ ಬಂದ ಐಷಾರಾಮಿ ಬಿಎಂಡಬ್ಲ್ಯೂ (BMW) ಕಾರನ್ನು ತಡೆದು ನಿಲ್ಲಿಸಿ, ಅದನ್ನು ವಾಪಸ್ ಕಳುಹಿಸುವ ಮೂಲಕ ಬಸ್ ಚಾಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಘಟನೆ ನಡೆದಿದ್ದೆಲ್ಲಿ?
ಹುಬ್ಬಳ್ಳಿಯ ವಿದ್ಯಾನಗರ ಬಿಆರ್‌ಟಿಎಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಕೇವಲ 'ಚಿಗರಿ' ಬಸ್‌ಗಳ ಸಂಚಾರಕ್ಕೆ ಮಾತ್ರ ಮೀಸಲಾದ ಬಿಆರ್‌ಟಿಎಸ್ ಪ್ರತ್ಯೇಕ ಪಥದಲ್ಲಿ ನಿಯಮ ಉಲ್ಲಂಘಿಸಿ ಬಿಎಂಡಬ್ಲ್ಯೂ ಕಾರು ಚಾಲಕ ರಾಂಗ್ ರೂಟ್‌ನಲ್ಲಿ ನುಗ್ಗಿದ್ದ. ಈ ವೇಳೆ ಎದುರಿಗೆ ಬರುತ್ತಿದ್ದ ಚಿಗರಿ ಬಸ್‌ಗೆ ಕಾರು ಅಡ್ಡಿಯಾಗಿದೆ.
ಕಾರು ಸವಾರನಿಗೆ ಚಾಲಕನ ಖಡಕ್ ವಾರ್ನಿಂಗ್
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಬಸ್ ಚಾಲಕರು ಜಾಗ ಬಿಟ್ಟು ಕೊಡುತ್ತಾರೆ ಎಂಬುದು ನಿಯಮ ಉಲ್ಲಂಘಿಸುವವರ ಲೆಕ್ಕಾಚಾರವಾಗಿರುತ್ತದೆ. ಆದರೆ, ಈ ಬಸ್ ಚಾಲಕ ಮಾತ್ರ ಕಿಂಚಿತ್ತೂ ಜಗ್ಗಲಿಲ್ಲ. ಕಾರು ಮುಂದೆ ಸಾಗದಂತೆ ಬಸ್ಸನ್ನು ಅಡ್ಡಲಾಗಿ ನಿಲ್ಲಿಸಿದ ಚಾಲಕ, ಕಾರನ್ನು ಕೂಡಲೇ ಹಿಂದಕ್ಕೆ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದರು.
ಕಾರು ಸವಾರ ಎಷ್ಟೇ ಪ್ರಯತ್ನಿಸಿದರೂ ಬಸ್ ಚಾಲಕ ದಾರಿ ಬಿಡದಿದ್ದಾಗ, ಅನಿವಾರ್ಯವಾಗಿ ಕಾರು ಚಾಲಕ ತನ್ನ ವಾಹನವನ್ನು ರಾಂಗ್ ರೂಟ್‌ನಿಂದ ರಿವರ್ಸ್ ಗೇರ್ ಹಾಕಿ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಕಾರು ವಾಪಸ್ ಹೋದ ಮೇಲೆಯೇ ಬಸ್ ಚಾಲಕ ತನ್ನ ಮಾರ್ಗದಲ್ಲಿ ಮುಂದೆ ಸಾಗಿದ್ದಾರೆ.
ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಿದ ಧೈರ್ಯ
ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಮಾರ್ಗವು ಕೇವಲ ಬಸ್‌ಗಳಿಗೆ ಮಾತ್ರ ಮೀಸಲು. ಆದರೆ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ನುಗ್ಗುವುದು ಸಾಮಾನ್ಯವಾಗಿದೆ. ಇದರಿಂದ ಬಸ್ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಅಪಘಾತಗಳ ಭಯವೂ ಇರುತ್ತದೆ. ಇಂದು ಬಸ್ ಚಾಲಕ ತೋರಿಸಿದ ಈ ದಿಟ್ಟತನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, "ಐಷಾರಾಮಿ ಕಾರು ಇದ್ದ ತಕ್ಷಣ ನಿಯಮಗಳು ಬದಲಾಗುವುದಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.