Skip to main content
ವಿಡಿಯೋ
crime

ಬೆಳಗಾವಿಯಲ್ಲಿ 'ತಲ್ವಾರ್' ಹಿಡಿದು ಆಟವಾಡೋ ಪುಡಿ ರೌಡಿಗಳಿಗೆ ಪೊಲೀಸರ ಬ್ರೇಕ್: ಒಂದೇ ತಿಂಗಳಲ್ಲಿ 7 ಕೇಸ್ ದಾಖಲು!

By Bhavana Gowda
ಬೆಳಗಾವಿಯಲ್ಲಿ 'ತಲ್ವಾರ್' ಹಿಡಿದು ಆಟವಾಡೋ ಪುಡಿ ರೌಡಿಗಳಿಗೆ ಪೊಲೀಸರ ಬ್ರೇಕ್: ಒಂದೇ ತಿಂಗಳಲ್ಲಿ 7 ಕೇಸ್ ದಾಖಲು!

ನಗರದ ಕಣಬರಗಿ ನಿವಾಸಿ ಗಂಗಾರಾಮ್ ಕುಳ್ಳನ್ನವರ ಎಂಬಾತ ತಲ್ವಾರ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಾ ಜನರಲ್ಲಿ ಆತಂಕ ಮೂಡಿಸಿದ್ದ.

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ತಲ್ವಾರ್ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಪುಡಿ ರೌಡಿಗಳಿಗೆ ಬೆಳಗಾವಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವವರ ವಿರುದ್ಧ ಪೊಲೀಸರು ಆಪರೇಷನ್ ಆರಂಭಿಸಿದ್ದು, ಕ್ರಿಮಿನಲ್‌ಗಳ ಎದೆಯಲ್ಲಿ ನಡುಕ ಶುರುವಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ!

ನಗರದ ಕಣಬರಗಿ ನಿವಾಸಿ ಗಂಗಾರಾಮ್ ಕುಳ್ಳನ್ನವರ ಎಂಬಾತ ತಲ್ವಾರ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಾ ಜನರಲ್ಲಿ ಆತಂಕ ಮೂಡಿಸಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಬೆಳಗಾವಿಯ ಮಾಳಮಾರುತಿ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ತಲ್ವಾರನ್ನು ಜಪ್ತಿ ಮಾಡಿದ್ದಾರೆ. ಗಂಗಾರಾಮ್ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈತನ ವಿರುದ್ಧ ರೌಡಿಶೀಟರ್ ಓಪನ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ಒಂದೇ ತಿಂಗಳಲ್ಲಿ 35 ಜನರ ವಿರುದ್ಧ ಕ್ರಮ

ಬೆಳಗಾವಿ ನಗರದಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಸ್ಕೃತಿಯನ್ನು ಬುಡಸಮೇತ ಕಿತ್ತೆಸೆಯಲು ಪೊಲೀಸರು ನಿರ್ಧರಿಸಿದ್ದಾರೆ.

ಮಾಳಮಾರುತಿ ಠಾಣೆಯಲ್ಲಿ ಅಬ್ಬರ: ಕೇವಲ ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯೊಂದರಲ್ಲೇ ಈ ಸಂಬಂಧ 7 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನಗರದಾದ್ಯಂತ ಕಾರ್ಯಾಚರಣೆ: ಇಡೀ ಬೆಳಗಾವಿ ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಇದುವರೆಗೆ ಸುಮಾರು 35 ಜನರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

ಪುಡಿ ರೌಡಿಗಳೇ ಟಾರ್ಗೆಟ್!

ಗ್ಯಾಂಗ್‌ಸ್ಟರ್‌ಗಳಂತೆ ಪೋಸು ನೀಡಲು ಹಾಗೂ ಸಾರ್ವಜನಿಕರನ್ನು ಬೆದರಿಸಲು ತಲ್ವಾರ್, ಲಾಂಗ್‌ಗಳಂತಹ ಮಾರಕಾಸ್ತ್ರಗಳನ್ನು ಬಳಸುವ ಯುವಕರು ಮತ್ತು ಪುಡಿ ರೌಡಿಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. "ಬೆಳಗಾವಿಯ ಶಾಂತಿ ಕದಡಲು ಯತ್ನಿಸುವವರು ಯಾರೇ ಇರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಶಸ್ತ್ರಾಸ್ತ್ರ ಹೊಂದಿರುವವರ ವಿರುದ್ಧ ರೌಡಿಶೀಟರ್ ತೆರೆಯುವ ಪ್ರಕ್ರಿಯೆ ಮುಂದುವರಿಯಲಿದೆ" ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.