Skip to main content
ವಿಡಿಯೋ
general

ಸಮಯಕ್ಕೆ ಸಿಗದ ಚಿಕಿತ್ಸೆ: ಕಿಮ್ಸ್ ಸಿಬ್ಬಂದಿಯ 'ಬೆಡ್ ಇಲ್ಲ' ಎಂಬ ನೆಪಕ್ಕೆ ಯುವಕ ಬ್ರೈನ್ ಡೆಡ್!

By Bhavana Gowda
ಸಮಯಕ್ಕೆ ಸಿಗದ ಚಿಕಿತ್ಸೆ: ಕಿಮ್ಸ್ ಸಿಬ್ಬಂದಿಯ 'ಬೆಡ್ ಇಲ್ಲ' ಎಂಬ ನೆಪಕ್ಕೆ ಯುವಕ ಬ್ರೈನ್ ಡೆಡ್!

ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾಗಿ ತುರ್ತು ಚಿಕಿತ್ಸೆಗಾಗಿ ಬಂದ ರೋಗಿಗೆ 'ಬೆಡ್ ಇಲ್ಲ' ಎಂಬ ನೆಪವೊಡ್ಡಿ ವಾಪಸ್ ಕಳುಹಿಸಿದ ಪರಿಣಾಮ, ಇಂದು 28 ವರ್ಷದ ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

ನಡೆದಿದ್ದೇನು?

ಧಾರವಾಡದ ಮೊಬರ ನಿವಾಸಿ ಪ್ರಕಾಶ್ ಮರಿಗೌಡ್ರು (28) ಎಂಬ ಜೆಸಿಬಿ ಚಾಲಕ ಸೋಮಾಪುರ – ನವಲೂರು ರಸ್ತೆಯಲ್ಲಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದ ಪ್ರಕಾಶ್‌ನನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಅಲ್ಲಿನ ಸಿಬ್ಬಂದಿ "ಬೆಡ್‌ಗಳು ಖಾಲಿ ಇಲ್ಲ" ಎಂಬ ಹಾರಿಕೆ ಉತ್ತರ ನೀಡಿ ರೋಗಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ 'ಬ್ರೈನ್ ಡೆಡ್'

ಕಿಮ್ಸ್‌ನಲ್ಲಿ ಚಿಕಿತ್ಸೆ ಸಿಗದ ಕಾರಣ, ಸಂಬಂಧಿಕರು ಅನಿವಾರ್ಯವಾಗಿ ಪ್ರಕಾಶ್‌ನನ್ನು ಧಾರವಾಡದ ಎಸ್‌ಡಿಎಂ (SDM) ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಅಷ್ಟರಲ್ಲೇ ಕಾಲ ಮಿಂಚಿ ಹೋಗಿತ್ತು. ತಲೆಗೆ ಪೆಟ್ಟಾಗಿ ರಕ್ತಸ್ರಾವ ಹೆಚ್ಚಾಗಿದ್ದರಿಂದ ಪ್ರಕಾಶ್ 'ಬ್ರೈನ್ ಡೆಡ್' (ಮೆದುಳು ನಿಷ್ಕ್ರಿಯ) ಸ್ಥಿತಿಗೆ ತಲುಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತೆ ಕಿಮ್ಸ್‌ಗೆ ವಾಪಸ್: ವೆಂಟಿಲೇಟರ್‌ ಮೇಲೆ ಜೀವನ

ಪ್ರಕಾಶ್ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ ಮತ್ತು ವೆಂಟಿಲೇಟರ್ ತೆಗೆದರೆ ಪ್ರಾಣ ಹೋಗುವುದು ಖಚಿತವಾದ ಹಿನ್ನೆಲೆಯಲ್ಲಿ, ಎಸ್‌ಡಿಎಂ ಸಿಬ್ಬಂದಿ ರೋಗಿಯನ್ನು ಮತ್ತೆ ಕಿಮ್ಸ್‌ಗೆ ರವಾನಿಸಿದ್ದಾರೆ. ಇದೀಗ ಅದೇ ಕಿಮ್ಸ್ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿರುವ ಪ್ರಕಾಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸಂಬಂಧಿಕರ ಆಕ್ರೋಶ

"ಮೊದಲೇ ಕಿಮ್ಸ್‌ನಲ್ಲಿ ದಾಖಲಿಸಿಕೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಪ್ರಕಾಶ್ ಬದುಕುತ್ತಿದ್ದ. ಸರ್ಕಾರಿ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಇಂದು ಒಬ್ಬ ಯುವಕನ ಜೀವನ ಕಮರಿ ಹೋಗುತ್ತಿದೆ" ಎಂದು ಸಂಬಂಧಿಕರು ಕಣ್ಣೀರಿಡುತ್ತಾ ಕಿಮ್ಸ್ ಆಡಳಿತ ಮಂಡಳಿಯ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಜೆಸಿಬಿ ಚಾಲಕನ ಸ್ಥಿತಿ ಕಂಡು ಸಾರ್ವಜನಿಕ ವಲಯದಲ್ಲಿಯೂ ಕಿಮ್ಸ್ ಸಿಬ್ಬಂದಿಯ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.