Skip to main content
ವಿಡಿಯೋ
local

ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ ಸಾಕು, ಮೆಟ್ರೋ ಪ್ರಯಾಣ ಉಚಿತ!

By Bhavana Gowda
ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ ಸಾಕು, ಮೆಟ್ರೋ ಪ್ರಯಾಣ ಉಚಿತ!

ಐಪಿಎಲ್ ಪಂದ್ಯದ ಟಿಕೆಟ್ ಹೊಂದಿರುವವರು ಮೆಟ್ರೋ ಟಿಕೆಟ್ ಖರೀದಿಸುವ ಅಗತ್ಯವಿಲ್ಲದೆ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ತರಲು ಪ್ಲಾನ್ ಮಾಡಲಾಗುತ್ತಿದೆ.

ಬೆಂಗಳೂರು: ಐಪಿಎಲ್ ಅಬ್ಬರ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಆರ್‌ಸಿಎಲ್ (BMRCL) ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳನ್ನು ನೋಡಲು ಬರುವವರಿಗೆ ಮೆಟ್ರೋ ಪ್ರಯಾಣವನ್ನು ಉಚಿತಗೊಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

ಟಿಕೆಟ್ ತೋರಿಸಿ, ಫ್ರೀಯಾಗಿ ಪ್ರಯಾಣಿಸಿ!

ಐಪಿಎಲ್ ಪಂದ್ಯದ ಟಿಕೆಟ್ ಹೊಂದಿರುವವರು ಮೆಟ್ರೋ ಟಿಕೆಟ್ ಖರೀದಿಸುವ ಅಗತ್ಯವಿಲ್ಲದೆ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ತರಲು ಪ್ಲಾನ್ ಮಾಡಲಾಗುತ್ತಿದೆ. ನಗರದ ಯಾವುದೇ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಪಂದ್ಯದ ದಿನದಂದು ಉಚಿತವಾಗಿ ಹೋಗಿ ಬರಲು ಈ ಆಫರ್ ಲಭ್ಯವಿರಲಿದೆ.

ಕ್ಯೂಆರ್ ಕೋಡ್ (QR Code) ತಂತ್ರಜ್ಞಾನ:

ಈ ಯೋಜನೆಯನ್ನು ಸರಳಗೊಳಿಸಲು ಐಪಿಎಲ್ ಪಂದ್ಯದ ಟಿಕೆಟ್ ಮೇಲೆ ವಿಶೇಷ ಕ್ಯೂಆರ್ ಕೋಡ್ ಅಳವಡಿಸಲು ಉದ್ದೇಶಿಸಲಾಗಿದೆ. ಮೆಟ್ರೋ ನಿಲ್ದಾಣದ ಗೇಟ್‌ಗಳಲ್ಲಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ಈ ಬಗ್ಗೆ ಬಿಎಂಆರ್‌ಸಿಎಲ್ ಅಧಿಕಾರಿಗಳು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಆರ್ ಸಿಬಿ ಮ್ಯಾನೇಜ್‌ಮೆಂಟ್ ನಡುವೆ ಮಾತುಕತೆ ನಡೆಯುತ್ತಿದೆ.

ಸದ್ಯ ಮಾತುಕತೆ ಹಂತದಲ್ಲಿ:

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಈ ಉಚಿತ ಪ್ರಯಾಣದ ಕುರಿತು ಸದ್ಯ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ. ಯೋಜನೆಯ ಸಾಧ್ಯಸಾಧ್ಯತೆಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಪಂದ್ಯ ಮುಗಿದ ಬಳಿಕ ಉಂಟಾಗುವ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಮಾರ್ಚ್ 28 ರಂದು ಮೊದಲ ಪಂದ್ಯ:

ಈ ಬಾರಿಯ ಐಪಿಎಲ್ ಆವೃತ್ತಿಯ ಮೊದಲ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅಂದು ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆರ್‌ಸಿಬಿ ಸೆಣಸಾಡಲಿದೆ. ಈ ಹಿಂದೆ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಇಲ್ಲಿ ಪಂದ್ಯ ಆಯೋಜಿಸುವ ಬಗ್ಗೆ ಆತಂಕವಿತ್ತಾದರೂ, ಇದೀಗ ಅಗತ್ಯ ಕ್ಲಿಯರೆನ್ಸ್ ಪಡೆದು ಪಂದ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.