ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ಇಂದು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Dubai Airport) ಮೇಲೆ ಭೀಕರ ಡ್ರೋನ್ ದಾಳಿ ನಡೆದಿದೆ. ಇರಾನ್ ಉಡಾಯಿಸಿದ ಡ್ರೋನ್ ವಿಮಾನ ನಿಲ್ದಾಣದ ಸಮೀಪವಿರುವ ಇಂಧನ ಟ್ಯಾಂಕ್‌ಗೆ ಅಪ್ಪಳಿಸಿದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಂಧನ ಟ್ಯಾಂಕ್ ಮೇಲೆ ದಾಳಿ:
ದುಬೈ ಮಾಧ್ಯಮ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಡ್ರೋನ್ ಒಂದು ವಿಮಾನ ನಿಲ್ದಾಣದ ಸಮೀಪವಿದ್ದ ಇಂಧನ ಟ್ಯಾಂಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಆವರಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ದುಬೈ ನಾಗರಿಕ ರಕ್ಷಣಾ ಪಡೆ (Civil Defence) ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ವಿಮಾನ ನಿಲ್ದಾಣ ಸ್ತಬ್ಧ, ರಸ್ತೆಗಳು ಬಂದ್:
ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಭದ್ರತಾ ದೃಷ್ಟಿಯಿಂದ ದುಬೈ ಪೊಲೀಸರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸುರಂಗ ಮಾರ್ಗಗಳನ್ನು (Airport Tunnel) ಮುಚ್ಚಿದ್ದಾರೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಿಮಾನಗಳ ಹಾರಾಟದ ಬಗ್ಗೆ ಅಧಿಕೃತ ಪ್ರಕಟಣೆಗಾಗಿ ಜನರು ಕಾಯುತ್ತಿದ್ದಾರೆ.
ಗುರಿಯಾಗುತ್ತಿರುವ ಯುಎಇ (UAE):
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದ ದಿನದಿಂದ ಇರಾನ್ ನಿರಂತರವಾಗಿ ಯುಎಇ ಮೇಲೆ ಕಣ್ಣಿಟ್ಟಿದೆ. ವರದಿಗಳ ಪ್ರಕಾರ, ಈವರೆಗೂ ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ 1,800 ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಇಂದಿನ ಘಟನೆಯು ಪ್ರಮುಖ ಮೂಲಸೌಕರ್ಯಗಳ ಭದ್ರತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.
ಅಧಿಕೃತ ಮಾಹಿತಿಗೆ ಮನವಿ:
ಸೋಷಿಯಲ್ ಮೀಡಿಯಾಗಳಲ್ಲಿ ಘಟನೆಯ ಬಗ್ಗೆ ಹಲವು ವದಂತಿಗಳು ಹಬ್ಬುತ್ತಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಕೇವಲ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ದುಬೈ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ಮುಂದುವರಿದಿದ್ದು, ಪರಿಸ್ಥಿತಿ ತಿಳಿಯಾದ ನಂತರ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.