ಬೆಂಗಳೂರು: ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ. ಇದರ ಜೊತೆಗೆ ಕರ್ನಾಟಕದ ಎರಡು ಪ್ರಮುಖ ಕ್ಷೇತ್ರಗಳ ಉಪಚುನಾವಣಾ ವೇಳಾಪಟ್ಟಿಯೂ ಹೊರಬಿದ್ದಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.
ಚುನಾವಣಾ ವೇಳಾಪಟ್ಟಿ ಹೀಗಿದೆ:
ಮತದಾನ ಆರಂಭ: ಏಪ್ರಿಲ್ 9 (ಮೊದಲ ಹಂತ)
ಮತದಾನ ಅಂತ್ಯ: ಏಪ್ರಿಲ್ 29 (ಕೊನೆಯ ಹಂತ)
ಫಲಿತಾಂಶ: ಮೇ 4, 2026
ವಿಶೇಷವೆಂದರೆ, ಕಳೆದ ಬಾರಿ 8 ಹಂತಗಳಲ್ಲಿ ನಡೆದಿದ್ದ ಪಶ್ಚಿಮ ಬಂಗಾಳದ ಚುನಾವಣೆಯನ್ನು ಈ ಬಾರಿ ಕೇವಲ 2 ಹಂತಗಳಲ್ಲಿ ನಡೆಸಲು ಆಯೋಗ ನಿರ್ಧರಿಸಿದೆ. 5 ವರ್ಷಗಳ ಹಿಂದೆ ಕೋವಿಡ್ ಅವಧಿಯಲ್ಲಿ 30 ದಿನಗಳ ಕಾಲ ನಡೆದಿದ್ದ ಪ್ರಕ್ರಿಯೆಯನ್ನು, ಈ ಬಾರಿ ಕೇವಲ 20 ದಿನಗಳಲ್ಲಿ ಮುಗಿಸಲು ಆಯೋಗ ಸನ್ನದ್ಧವಾಗಿದೆ.
ಕರ್ನಾಟಕದ ಉಪಸಮರ: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ
ರಾಜ್ಯದ ಹಿರಿಯ ನಾಯಕರಾಗಿದ್ದ ಎಚ್.ವೈ. ಮೇಟಿ (ಬಾಗಲಕೋಟೆ) ಮತ್ತು ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ) ಅವರ ನಿಧನದಿಂದ ತೆರವಾಗಿದ್ದ ಸ್ಥಾನಗಳಿಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ.
ದಾವಣಗೆರೆ ದಕ್ಷಿಣ ಕಣ: ಇಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಸದಸ್ಯರೇ ಕಾಂಗ್ರೆಸ್ ಟಿಕೆಟ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಆದರೆ, ಕೆಲವು ಮುಸ್ಲಿಂ ನಾಯಕರು ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇತ್ತ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದ್ದು, ಅಭ್ಯರ್ಥಿ ಯಾರೇ ಆದರೂ ಗೆಲುವಿಗಾಗಿ ಶ್ರಮಿಸಲು ಕಾರ್ಯಕರ್ತರು ಸಜ್ಜಾಗಿದ್ದಾರೆ.
ಬಾಗಲಕೋಟೆ ಕಣ:
ಇಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಮೇಟಿ ಕುಟುಂಬದ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. ಬಿಜೆಪಿಯಿಂದ ಚರಂತಿಮಠ ಅವರ ಹೆಸರು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕಾಂಗ್ರೆಸ್‌ನಲ್ಲಿ ಮೇಟಿ ಅವರ ಪುತ್ರ ಹಾಗೂ ಪುತ್ರಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ.
ಪಂಚರಾಜ್ಯಗಳ 'ಪ್ರತಿಷ್ಠೆಯ ಕದನ'
ಈ ಬಾರಿಯ ಚುನಾವಣೆ ಹಲವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ:
ತಮಿಳುನಾಡು: ಡಿಎಂಕೆ-ಕಾಂಗ್ರೆಸ್ ಒಕ್ಕೂಟ ಹಾಗೂ ಎಐಎಡಿಎಂಕೆ-ಬಿಜೆಪಿ ಒಕ್ಕೂಟದ ನಡುವೆ ಭಾರಿ ಪೈಪೋಟಿ ಇದೆ. ನಟ ವಿಜಯ್ ನೇತೃತ್ವದ ಟಿವಿಕೆ (TVK) ಮತ್ತು ಶಶಿಕಲಾ ಅವರ ಎಂಟ್ರಿ ಕುತೂಹಲ ಮೂಡಿಸಿದೆ.
ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಬಿಜೆಪಿ ಮತ್ತು ಎಡರಂಗದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಕೇರಳ & ಅಸ್ಸಾಂ: ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸಂಘರ್ಷವಿದ್ದರೆ, ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೋರಾಡುತ್ತಿದೆ.
ಮತದಾನ ಪೂರ್ವ ಸಮೀಕ್ಷೆ (Pre-Poll Survey) ಏನನ್ನುತ್ತೆ?
ಐಎಎನ್ಎಸ್ (IANS) ನಡೆಸಿದ ಸಮೀಕ್ಷೆಯ ಪ್ರಕಾರ:
ತಮಿಳುನಾಡು: ಇಲ್ಲಿ ಆಡಳಿತಾರೂಢ ಡಿಎಂಕೆ ಅಧಿಕಾರ ಕಳೆದುಕೊಳ್ಳಲಿದ್ದು, ಅಣ್ಣಾಡಿಎಂಕೆ ಕೂಟ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಬಂಗಾಳ & ಅಸ್ಸಾಂ: ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ (ಟಿಎಂಸಿ) ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿವೆ.
ಕೇರಳ: ಕೇರಳದಲ್ಲಿ ಮತ್ತೆ ಎಡರಂಗವೇ (LDF) ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಮುಖ ದಿನಾಂಕಗಳು:
ಅಧಿಸೂಚನೆ: ಮಾರ್ಚ್ 16
ನಾಮಪತ್ರ ಸಲ್ಲಿಕೆಗೆ ಕೊನೆ ದಿನ: ಮಾರ್ಚ್ 23
ಮತದಾನ: ಏಪ್ರಿಲ್ 9
ಫಲಿತಾಂಶ: ಮೇ 4