Skip to main content
ವಿಡಿಯೋ
politics

ಬಾಗಲಕೋಟೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮಾದರಿ ನೀತಿ ಸಂಹಿತೆ ಜಾರಿ

By Bhavana Gowda
ಬಾಗಲಕೋಟೆ ಉಪಚುನಾವಣೆ ಘೋಷಣೆ: ಏಪ್ರಿಲ್ 9ಕ್ಕೆ ಮತದಾನ, ಮಾದರಿ ನೀತಿ ಸಂಹಿತೆ ಜಾರಿ

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತವು ಬೃಹತ್ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 9,597 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಬಾಗಲಕೋಟೆ: ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಚುನಾವಣಾ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಜಿಲ್ಲೆಯಾದ್ಯಂತ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಂಗಪ್ಪ ಅವರು ಮಾಹಿತಿ ನೀಡಿದ್ದಾರೆ.

ಚುನಾವಣಾ ಪ್ರಮುಖ ದಿನಾಂಕಗಳು:

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಮಾರ್ಚ್ 23

ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಮಾರ್ಚ್ 26

ಮತದಾನ ನಡೆಯುವ ದಿನಾಂಕ: ಏಪ್ರಿಲ್ 9

ಮತ ಎಣಿಕೆ ಹಾಗೂ ಫಲಿತಾಂಶ: ಮೇ 4

ಮತದಾರರ ವಿವರ ಮತ್ತು ಮತಕೇಂದ್ರಗಳು

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 2,59,260 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಪುರುಷ ಮತದಾರರು: 1,26,761

ಮಹಿಳಾ ಮತದಾರರು: 1,32,476

ಇತರೆ: 23

ಯುವ ಮತದಾರರು: 4188

ವಿಶೇಷಚೇತನ ಮತದಾರರು: 2633

ಕ್ಷೇತ್ರದಲ್ಲಿ ಒಟ್ಟು 319 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 143 ನಗರ ಪ್ರದೇಶಗಳಲ್ಲಿ ಹಾಗೂ 176 ಗ್ರಾಮೀಣ ಭಾಗದಲ್ಲಿ ಇರಲಿವೆ. ವಿಶೇಷವೆಂದರೆ, ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 3017 ಮತದಾರರಿದ್ದರೆ, 100 ವರ್ಷ ದಾಟಿದ 38 ಶತಾಯುಷಿ ಮತದಾರರಿದ್ದಾರೆ.

ಚುನಾವಣಾ ಸಿದ್ಧತೆ ಮತ್ತು ಕಠಿಣ ನಿಯಮಗಳು

ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತವು ಬೃಹತ್ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 9,597 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ತಪಾಸಣಾ ತಂಡಗಳು: 29 ಸೆಕ್ಟರ್ ಅಧಿಕಾರಿಗಳು, 60 ಫ್ಲಾಯಿಂಗ್ ಸ್ಕ್ವಾಡ್‌ಗಳು, 24 ಚೆಕ್ ಪೋಸ್ಟ್‌ಗಳು ಹಾಗೂ 72 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ.

ವೆಚ್ಚದ ಮಿತಿ: ಒಬ್ಬ ಅಭ್ಯರ್ಥಿಗೆ ಗರಿಷ್ಠ 40 ಲಕ್ಷ ರೂಪಾಯಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ.

ನಗದು ನಿಯಮ: ಸಾರ್ವಜನಿಕರು ದಾಖಲೆ ಇಲ್ಲದೆ ಗರಿಷ್ಠ 50 ಸಾವಿರ ರೂಪಾಯಿವರೆಗೆ ಮಾತ್ರ ಹಣವನ್ನು ತೆಗೆದುಕೊಂಡು ಹೋಗಬಹುದು. ಹೆಚ್ಚಿನ ಹಣವಿದ್ದರೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಸ್ಟಾರ್ ಕ್ಯಾಂಪೇನರ್‌ಗಳಿಗೆ 1 ಲಕ್ಷ ರೂಪಾಯಿವರೆಗೆ ಅವಕಾಶ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿ ಸಂಗಪ್ಪ ಅವರು, ಚುನಾವಣಾ ಅಕ್ರಮಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.