ಕಲಬುರಗಿ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಓಲೈಕೆಯಲ್ಲಿ ಮಗ್ನವಾಗಿದ್ದು, ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್ ತನ್ನ ಈ ನೀತಿಯನ್ನು ಬದಲಿಸಿಕೊಳ್ಳದಿದ್ದರೆ ವಿದೇಶಗಳಲ್ಲಿ ಸೃಷ್ಟಿಯಾಗಿರುವ ಅರಾಜಕತೆಯ ಪರಿಸ್ಥಿತಿ ನಮಗೂ ಎದುರಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮತ್ತು ರಾಜ್ಯ ರಾಜಕಾರಣದ ಹಲವು ವಿಚಾರಗಳ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಬ್ಯಾನ್ ವಿಚಾರಕ್ಕೆ ತಿರುಗೇಟು:
ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಆರ್‌ಎಸ್‌ಎಸ್ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಅದು ಇಂದು ವಿಶ್ವದ ಗಮನ ಸೆಳೆದಿದೆ. ಮಾಜಿ ಪ್ರಧಾನಿಗಳಾದ ನೆಹರೂ ಮತ್ತು ಇಂದಿರಾ ಗಾಂಧಿಯವರಿಂದಲೇ ಸಂಘವನ್ನು ಬ್ಯಾನ್ ಮಾಡಲು ಸಾಧ್ಯವಾಗಿಲ್ಲ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ಕೈಯಿಂದ ಅದು ಸಾಧ್ಯವೇ?" ಎಂದು ಪ್ರಶ್ನಿಸಿದರು. ಅಲ್ಲದೆ, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು 'ಎಳಸು' ಎಂದು ವ್ಯಂಗ್ಯವಾಡಿದರು.
ಮುಸ್ಲಿಂ ಓಲೈಕೆ ಮತ್ತು ವಕ್ಫ್ ಆಸ್ತಿ ವಿವಾದ:
"ಕಾಂಗ್ರೆಸ್ ಸರ್ಕಾರವು ಕೇವಲ ಅಲ್ಪಸಂಖ್ಯಾತರ ಓಲೈಕೆಗೆ ಸೀಮಿತವಾಗಿದೆ. ಮುಸ್ಲಿಂ ಶಾಲೆಗಳಿಗೆ ವಿಶೇಷ ಅನುದಾನ, ವೃದ್ಧಾಶ್ರಮ, ನಿರುದ್ಯೋಗಿಗಳಿಗೆ ಸಹಾಧನ ಮತ್ತು ಸಾಲದ ಬಡ್ಡಿ ಮನ್ನಾ ಮಾಡುವ ಸರ್ಕಾರ, ಹಿಂದುಳಿದ ವರ್ಗಗಳಿಗೆ ಏನು ನೀಡಿದೆ?" ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇದೇ ವೇಳೆ ವಕ್ಫ್ ಆಸ್ತಿ ಅತಿಕ್ರಮಣದ ಬಗ್ಗೆ ಪ್ರಸ್ತಾಪಿಸಿದ ಅವರು, "ಸುಮಾರು ಒಂದು ಲಕ್ಷಕ್ಕೂ ಅಧಿಕ ಎಕರೆ ವಕ್ಫ್ ಜಮೀನು ಅತಿಕ್ರಮಣವಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು" ಎಂದು ಒತ್ತಾಯಿಸಿದರು.
ದೇಶದ ಸುರಕ್ಷತೆ ಮತ್ತು ಜಾಗತಿಕ ವಿದ್ಯಮಾನ:
ಮಧ್ಯಪ್ರಾಚ್ಯದ ಯುದ್ಧದ ಬಗ್ಗೆ ಮಾತನಾಡುತ್ತಾ, ಇರಾನ್ ಸರ್ವಾಧಿಕಾರಿ ಖಮೇನಿ ಹತ್ಯೆಯನ್ನು ವಿರೋಧಿಸಿ ಭಾರತದಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ಮಾಡುತ್ತಿರುವುದನ್ನು ಈಶ್ವರಪ್ಪ ಟೀಕಿಸಿದರು. "ಪಹಲ್ಗಾಮ್‌ನಲ್ಲಿ ಉಗ್ರರು ಹಿಂದೂಗಳನ್ನು ಗುರುತಿಸಿ ಹತ್ಯೆ ಮಾಡಿದಾಗ ಇಲ್ಲಿನ ಒಬ್ಬ ಮುಸ್ಲಿಂ ಕೂಡ ಧ್ವನಿ ಎತ್ತಲಿಲ್ಲ. ಆದರೆ ಇರಾನ್‌ನಲ್ಲಿ ಹತ್ಯೆಯಾದರೆ ಇಲ್ಲಿ ಪ್ರತಿಭಟನೆ ಮಾಡುತ್ತಾರೆ. ಮುಸ್ಲಿಮರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು" ಎಂದು ಹೇಳಿದರು.
ರಾಜ್ಯ ಸರ್ಕಾರದ ವೈಫಲ್ಯ:
"ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಸದನದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ ಮಾಡಿದ್ದಾರೆ ಎಂದರೆ ಇದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ. ಮಂತ್ರಿಗಳೇ ಇಲ್ಲದ ಮೇಲೆ ಸದನವನ್ನೇಕೆ ನಡೆಸಬೇಕು? ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಉಪಮುಖ್ಯಮಂತ್ರಿಗಳು ಸಿಎಂ ಆಗಲು ಹವಣಿಸುತ್ತಿದ್ದಾರೆ. ಶಾಸಕರು ಮಂತ್ರಿಗಳಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರವು ಕೇವಲ ಅಧಿಕಾರ ದಾಹಕ್ಕಾಗಿ ನಡೆಯುತ್ತಿದೆಯೇ ಹೊರತು ಜನಹಿತಕ್ಕಾಗಿ ಅಲ್ಲ" ಎಂದು ಆಕ್ರೋಶ ಹೊರಹಾಕಿದರು.