Skip to main content
ವಿಡಿಯೋ
local

ಕರವೇ ಹೋರಾಟಕ್ಕೆ ಮಣಿದ ನೈರುತ್ಯ ರೈಲ್ವೆ: ಕನ್ನಡವಿಲ್ಲದ ಮುಂಬಡ್ತಿ ಪರೀಕ್ಷೆ ರದ್ದು!

By Bhavana Gowda
ಕರವೇ ಹೋರಾಟಕ್ಕೆ ಮಣಿದ ನೈರುತ್ಯ ರೈಲ್ವೆ: ಕನ್ನಡವಿಲ್ಲದ ಮುಂಬಡ್ತಿ ಪರೀಕ್ಷೆ ರದ್ದು!

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ 101 ಹಾಗೂ ಒಟ್ಟು 194 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳ ಮುಂಬಡ್ತಿಗಾಗಿ ಇಂದು (ಮಾರ್ಚ್ 17) ಪರೀಕ್ಷೆ ನಿಗದಿಯಾಗಿತ್ತು.

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ತೀವ್ರ ಹೋರಾಟಕ್ಕೆ ನೈರುತ್ಯ ರೈಲ್ವೆ ಇಲಾಖೆ ಕೊನೆಗೂ ಮಣಿದಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿದ್ದ ಗೂಡ್ಸ್ ಟ್ರೈನ್ ಮ್ಯಾನೇಜರ್ ಎಲ್‌ಡಿಸಿಇ (LDCE) ಮುಂಬಡ್ತಿ ಪರೀಕ್ಷೆಯನ್ನು ರೈಲ್ವೆ ಇಲಾಖೆ ಇಂದು ರದ್ದುಪಡಿಸಿದೆ. ಕನ್ನಡ ಭಾಷೆಗೆ ಅವಕಾಶ ನೀಡದ ಇಲಾಖೆಯ ಕ್ರಮದ ವಿರುದ್ಧ ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಹೋರಾಟಕ್ಕೆ ಸಿಕ್ಕ ಜಯ:

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ 101 ಹಾಗೂ ಒಟ್ಟು 194 ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳ ಮುಂಬಡ್ತಿಗಾಗಿ ಇಂದು (ಮಾರ್ಚ್ 17) ಪರೀಕ್ಷೆ ನಿಗದಿಯಾಗಿತ್ತು. ಆದರೆ, ಈ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿತ್ತು. ಇದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು.

ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ:

ಇಂದು ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗುತ್ತಿದ್ದಂತೆ ಬೆಂಗಳೂರಿನ ಎಂಡಿಡಿಟಿಐ (MDDTI) ಟ್ರೈನಿಂಗ್ ಸೆಂಟರ್, ಮೈಸೂರು ಮತ್ತು ಹುಬ್ಬಳ್ಳಿ ಪರೀಕ್ಷಾ ಕೇಂದ್ರಗಳ ಮುಂದೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಬೆಂಗಳೂರಿನ ಡಿವಿಜನಲ್ ರೈಲ್ವೆ ಮ್ಯಾನೇಜರ್ (DRM) ಕಚೇರಿ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ರಾಜ್ಯದ ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪೊಲೀಸರಿಂದ ಬಂಧನ:

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಹಲವು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು. "ಕನ್ನಡಿಗರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು" ಎಂದು ಪಟ್ಟು ಹಿಡಿದ ಕಾರ್ಯಕರ್ತರ ಆರ್ಭಟಕ್ಕೆ ರೈಲ್ವೆ ಇಲಾಖೆ ತತ್ತರಿಸಿತು.

ರೈಲ್ವೆ ಇಲಾಖೆಯ ನಿರ್ಧಾರ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ನೈರುತ್ಯ ರೈಲ್ವೆ ಅಧಿಕಾರಿಗಳು, ತಕ್ಷಣವೇ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು. ಈ ಮೂಲಕ ಕನ್ನಡಿಗರ ಭಾಷಾ ಹಕ್ಕಿನ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ. ಈ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಕನ್ನಡ ಭಾಷೆ ಅಳವಡಿಕೆ ಕುರಿತ ಮುಂದಿನ ಕ್ರಮಗಳ ಬಗ್ಗೆ ಇಲಾಖೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.