Skip to main content
ವಿಡಿಯೋ
local

ರಥೋತ್ಸವದ ವೇಳೆ ಕಾರ್ ಅಡ್ಡ ನಿಲ್ಲಿಸಿ ಕಿರಿಕ್; ಮೂವರು ‘ಕಿರಿಕ್ ಪಾರ್ಟಿ’ಗಳ ಬಂಧನ

By Bhavana Gowda
ರಥೋತ್ಸವದ ವೇಳೆ ಕಾರ್ ಅಡ್ಡ ನಿಲ್ಲಿಸಿ ಕಿರಿಕ್; ಮೂವರು ‘ಕಿರಿಕ್ ಪಾರ್ಟಿ’ಗಳ ಬಂಧನ

ಕಾರು ತೆರವು ಮಾಡುವಂತೆ ಕೇಳಿದ್ದಕ್ಕೆ ಆಕ್ರೋಶಗೊಂಡ ಸಲೀಂ ಮತ್ತು ತಂಡ, ಜಾತ್ರಾ ಕಮಿಟಿಯ ಯುವಕರ ಜೊತೆ ವಾಗ್ವಾದಕ್ಕಿಳಿದಿದೆ.

ಗದಗ: ಜಿಲ್ಲೆಯ ಮಲ್ಲಸಮುದ್ರ ಗ್ರಾಮದಲ್ಲಿ ಜರುಗಿದ ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ರಥೋತ್ಸವಕ್ಕೆ ಅಡ್ಡಿಪಡಿಸಿ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಗದಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಮಲ್ಲಸಮುದ್ರ ಗ್ರಾಮದಲ್ಲಿ ಸಂಪ್ರದಾಯದಂತೆ ಅತ್ಯಂತ ಸಡಗರದಿಂದ ಬಸವೇಶ್ವರ ಜಾತ್ರೆ ನಡೆಯುತ್ತಿತ್ತು. ಈ ವೇಳೆ ರಥೋತ್ಸವದ ಮೆರವಣಿಗೆ ಸಾಗುವ ಮಾರ್ಗ ಮಧ್ಯೆಯೇ ಸಲೀಂ ಮತ್ತು ಆತನ ತಂಡ ಕಾರನ್ನು ತಂದು ಅಡ್ಡಲಾಗಿ ನಿಲ್ಲಿಸಿತ್ತು. ರಥ ಸಾಗಲು ದಾರಿಯಿಲ್ಲದ ಕಾರಣ, ಜಾತ್ರಾ ಕಮಿಟಿಯ ಯುವಕರು ಕಾರನ್ನು ಪಕ್ಕಕ್ಕೆ ಸರಿಸುವಂತೆ ಮನವಿ ಮಾಡಿದ್ದರು.

ಪ್ರಶ್ನಿಸಿದ್ದಕ್ಕೆ ಹಲ್ಲೆ

ಕಾರು ತೆರವು ಮಾಡುವಂತೆ ಕೇಳಿದ್ದಕ್ಕೆ ಆಕ್ರೋಶಗೊಂಡ ಸಲೀಂ ಮತ್ತು ತಂಡ, ಜಾತ್ರಾ ಕಮಿಟಿಯ ಯುವಕರ ಜೊತೆ ವಾಗ್ವಾದಕ್ಕಿಳಿದಿದೆ. ಮಾತಿಗೆ ಮಾತು ಬೆಳೆದು, ಕೊನೆಗೆ ಕಮಿಟಿಯ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಜಾತ್ರೆಯ ಸಂಭ್ರಮದ ನಡುವೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಆರೋಪಿಗಳ ಬಂಧನ

ಘಟನೆಗೆ ಸಂಬಂಧಿಸಿದಂತೆ ಜಾತ್ರಾ ಕಮಿಟಿಯವರು ನೀಡಿದ ದೂರಿನನ್ವಯ ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಲೀಂ ಬಡೇಖಾನ್, ಲೋಕೇಶ್ ರಾಮಜಿ ಹಾಗೂ ಮಂಜುನಾಥ್ ಹಾದಿಮನಿ ಎಂಬುವವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.