ಬುಲಂದ್‌ಶಹರ್: "ಜೀವ ಉಳಿದ್ರೆ ಸಾಕು ಮಹಾರಾಯ.." ಎನ್ನುವ ಮಾತು ಉತ್ತರ ಪ್ರದೇಶದ ಈ ಪತಿಗೆ ಅಕ್ಷರಶಃ ಅನ್ವಯಿಸಿದೆ. ಹೆಂಡತಿಯ ಫೇಸ್‌ಬುಕ್ ಪೋಸ್ಟ್ ಒಂದನ್ನು ಕಂಡು ಬೆಚ್ಚಿಬಿದ್ದ ಪತಿಯೊಬ್ಬ, ತನ್ನನ್ನೂ ಕೊಲೆ ಮಾಡಬಹುದು ಎಂಬ ಭೀತಿಯಲ್ಲಿ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೇ ಕಳುಹಿಸಿಕೊಟ್ಟಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಬುಲಂದ್‌ಶಹರ್ ನಿವಾಸಿ ರಾಜಕುಮಾರ್ ಎಂಬುವವರು ಇತ್ತೀಚೆಗೆ ತಮ್ಮ ಪತ್ನಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಘಾತಕಾರಿ ವಿಷಯವೊಂದು ಕಂಡುಬಂದಿದೆ. ಅವರ ಪತ್ನಿ ಫೇಸ್‌ಬುಕ್‌ನಲ್ಲಿ ಹಳೆಯ ಕೊಲೆ ಪ್ರಕರಣವೊಂದರ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಮೀರತ್‌ನಲ್ಲಿ ನಡೆದಿದ್ದ ಘೋರ ಕೊಲೆಯ ಉಲ್ಲೇಖವಿತ್ತು.
ಆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿತ್ತು?
ಕೆಲವು ಸಮಯದ ಹಿಂದೆ ಮೀರತ್‌ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದು, ದೇಹವನ್ನು ತುಂಡರಿಸಿ ನೀಲಿ ಬಣ್ಣದ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದಳು. ಈ ಸುದ್ದಿಯ ಫೋಟೋಗಳನ್ನು ಪತ್ನಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನು ನೋಡಿದ ರಾಜಕುಮಾರ್ ಅವರಿಗೆ ಮೈ ನಡುಕ ಶುರುವಾಗಿದೆ.
ಕೊಲೆ ಸಂಚಿನ ಭೀತಿ!
ತನ್ನ ಪತ್ನಿ ಕೂಡ ಪ್ರಿಯಕರನ ಜೊತೆ ಸೇರಿ ನನ್ನನ್ನು ಇದೇ ರೀತಿ ಕೊಲೆ ಮಾಡಲು ಸಂಚು ರೂಪಿಸುತ್ತಿರಬಹುದು ಎಂದು ರಾಜಕುಮಾರ್ ದೃಢವಾಗಿ ನಂಬಿದ್ದಾರೆ. "ನನ್ನನ್ನೂ ಹೀಗೆ ತುಂಡು ಮಾಡಿ ಡ್ರಮ್‌ನಲ್ಲಿ ಹಾಕಿದರೆ ಗತಿ ಏನು?" ಎಂದು ಯೋಚಿಸಿದ ಅವರು, ತಡಮಾಡದೆ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತನ್ನ ಪ್ರಾಣ ಉಳಿಸಿಕೊಂಡರೆ ಸಾಕು ಎಂದು ಭಾವಿಸಿದ ರಾಜಕುಮಾರ್, ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.