ನೆತನ್ಯಾಹು ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು
ಬೆಂಜಮಿನ್ ನೆತನ್ಯಾಹು ಬದುಕಿದ್ದಾರೆಯೇ ಅಥವಾ ಅವರಿಗೆ ಏನಾದರೂ ಅನಾಹುತ ಸಂಭವಿಸಿದೆಯೇ ಎಂಬ ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದ ಇಸ್ರೇಲ್ ನಾಯಕರು, ಮಾರ್ಚ್ 18 ರಂದು ಜೆರುಸಲೆಮ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮೌನ ಮುರಿದರು.
ಆಡಳಿತ ಬದಲಾವಣೆಯ ಕುರಿತು: ಆಲಿ ಖಮೇನಿಯಿಂದ ಮೊಜ್ತಾಬಾ ಖಮೇನಿಗೆ ಅಧಿಕಾರ ವರ್ಗಾವಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಮಗೆ ಬೇಕಾಗಿರುವುದು ಹಿಜ್ಬುಲ್ಲಾ ಮತ್ತು ಹಮಾಸ್‌ನಂತಹ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸದ ಶಾಶ್ವತ ರಚನಾತ್ಮಕ ಬದಲಾವಣೆ ಎಂದು ಅವರು ಹೇಳಿದರು. ಕೇವಲ ವೈಮಾನಿಕ ದಾಳಿಯಿಂದ ಕ್ರಾಂತಿ ತರಲು ಸಾಧ್ಯವಿಲ್ಲ, ಅದಕ್ಕೆ ಭೂಸೇನೆಯ ಕಾರ್ಯಾಚರಣೆಯ ಅಗತ್ಯವೂ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಪರಮಾಣು ಸಾಮರ್ಥ್ಯದ ನಾಶ: ಇರಾನ್ ಇನ್ನು ಮುಂದೆ ಪರಮಾಣು ಸೌಲಭ್ಯವನ್ನು ವೃದ್ಧಿಸಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದರು. ಇರಾನ್ ಮೇಲೆ ನಡೆದ ಇಪ್ಪತ್ತು ದಿನಗಳ ವಿನಾಶಕಾರಿ ದಾಳಿಯು ಅವರ ಎಲ್ಲಾ ಪರಮಾಣು ಯೋಜನೆಗಳನ್ನು ಅಂತ್ಯಗೊಳಿಸಿದೆ ಮತ್ತು ಅವರ ಬಳಿ ಈಗ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳಿಲ್ಲ ಎಂದು ಅವರು ತಿಳಿಸಿದರು.
ಜಂಟಿ ಕಾರ್ಯಾಚರಣೆ: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಪರಮಾಣು, ಡ್ರೋನ್ ಮತ್ತು ಕ್ಷಿಪಣಿ ಕಾರ್ಖಾನೆಗಳನ್ನು ಗುರಿಯಾಗಿಸಿಕೊಂಡಿವೆ ಮತ್ತು ಅವುಗಳಲ್ಲಿ ಹೆಚ್ಚಿನವುಗಳನ್ನು ನಾಶಪಡಿಸಲಾಗಿದೆ. ಕಳೆದ ಮೂರು ದಿನಗಳಿಂದ ಅಮೆರಿಕ ಅಧ್ಯಕ್ಷರು ಯುದ್ಧದಿಂದ ದೂರ ಉಳಿದಿದ್ದರೂ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವನ್ನು (Gas field) ನಾಶಪಡಿಸುವಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಅವರು ಹೇಳಿದರು.
ಅಮೆರಿಕದ ನಿರ್ಧಾರ: ಇರಾನ್ ವಿರುದ್ಧ ಯುದ್ಧ ಮಾಡುವಂತೆ ಇಸ್ರೇಲ್ ಅಮೆರಿಕವನ್ನು ಪ್ರೇರೇಪಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನೆತನ್ಯಾಹು, ಇಸ್ರೇಲ್ ಯಾರ ಮೇಲೂ ಪ್ರಭಾವ ಬೀರಿಲ್ಲ ಮತ್ತು ಇರಾನ್ ಮೇಲೆ ದಾಳಿ ಮಾಡುವ ನಿರ್ಧಾರವನ್ನು ಅಮೆರಿಕ ಸ್ವತಃ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ಗುರಿ: ಇರಾನ್‌ನ ಭದ್ರತಾ ಅಧಿಕಾರಿ ಅಲಿ ಲಾರಿಜಾನಿಯನ್ನು ಹತ್ಯೆಗೈದ ನಂತರ, ಈಗ ನಮ್ಮ ಏಕೈಕ ಗುರಿ ಮೊಜ್ತಾಬಾ ಖಮೇನಿ ಎಂದು ಅವರು ದೃಢಪಡಿಸಿದರು. ಮೊಜ್ತಾಬಾ ಖಮೇನಿಯನ್ನು ಮಟ್ಟಹಾಕಿದರೆ ಅರ್ಧ ಯುದ್ಧ ಗೆದ್ದಂತೆ ಎಂದು ಅವರು ಹೇಳಿದರು.
ಲಾರಿಜಾನಿ ಹತ್ಯೆಯ ನಂತರ, ಕಳೆದ ಶನಿವಾರದಿಂದ ಮೊಜ್ತಾಬಾ ಖಮೇನಿ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ.