ಬೆಳಗಾವಿ: ಸೈಬರ್ ವಂಚಕರ ಜಾಲ ಈಗ ಮಿತಿಮೀರಿದ್ದು, ಬೆಳಗಾವಿಯ ವೃದ್ಧ ಉದ್ಯಮಿಯೊಬ್ಬರು ಬರೋಬ್ಬರಿ 15 ಕೋಟಿ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ. 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಮಾದರಿಯ ವಂಚನೆಗೆ ಸಿಲುಕಿದ ಉದ್ಯಮಿ, ಹಂತ ಹಂತವಾಗಿ ಕೋಟಿ ಕೋಟಿ ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿ ಈಗ ಕಣ್ಣೀರು ಹಾಕುತ್ತಿದ್ದಾರೆ.
ನಡೆದಿದ್ದೇನು?
ವಂಚಕರು ಮಾರ್ಚ್ 18 ರಂದು ಉದ್ಯಮಿಗೆ ವಿಡಿಯೋ ಕಾಲ್ ಮಾಡಿ, ತಾವು ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. "ನಿಮ್ಮ ಬ್ಯಾಂಕ್ ಖಾತೆಯು ಮನಿ ಲಾಂಡ್ರಿಂಗ್ (ಹಣ ಅಕ್ರಮ ವರ್ಗಾವಣೆ) ವಂಚನೆಯ ಪಟ್ಟಿಯಲ್ಲಿದೆ. ನೀವು ದೇಶದ್ರೋಹದ ಕೆಲಸದಲ್ಲಿ ಭಾಗಿಯಾಗಿದ್ದೀರಿ" ಎಂದು ಬೆದರಿಸಿದ್ದಾರೆ.
ಅಲ್ಲದೆ, ತನಿಖೆ ಮುಗಿಯುವವರೆಗೆ ನಿಮ್ಮ ಹಣವನ್ನು ನಾವು ನೀಡುವ ಸುರಕ್ಷಿತ ಖಾತೆಗೆ ವರ್ಗಾಯಿಸಬೇಕು, ತನಿಖೆ ಮುಗಿದ ನಂತರ ಎಲ್ಲವನ್ನೂ ಮರಳಿಸುತ್ತೇವೆ ಎಂದು ನಂಬಿಸಿದ್ದಾರೆ. ಈ ಬೆದರಿಕೆಯಿಂದ ಗಾಬರಿಗೊಂಡ ವೃದ್ಧ ಉದ್ಯಮಿ, ಅವರು ಹೇಳಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 15 ಕೋಟಿ ರೂಪಾಯಿ ಜಮೆ ಮಾಡಿದ್ದಾರೆ.
ಪೊಲೀಸರ ಕಾರ್ಯಚರಣೆ
ಹಣ ವರ್ಗಾವಣೆಯಾದ ನಂತರ ವಂಚಕರು ಸಂಪರ್ಕಕ್ಕೆ ಸಿಗದಿದ್ದಾಗ ಉದ್ಯಮಿಗೆ ತಾನು ಮೋಸಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಬೆಳಗಾವಿ ನಗರ ಸಿಇಎನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
90 ಲಕ್ಷ ರೂ. ಫ್ರೀಜ್: ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ವಂಚಕರ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿ 90 ಲಕ್ಷ ರೂಪಾಯಿ ಹಣವಿದ್ದ ಖಾತೆಯನ್ನು ತಕ್ಷಣವೇ ಫ್ರೀಜ್ ಮಾಡಿದ್ದಾರೆ.
ವಿಶೇಷ ತಂಡ ರಚನೆ: ಸೈಬರ್ ವಂಚಕರನ್ನು ಪತ್ತೆಹಚ್ಚಲು ಬೆಳಗಾವಿ ಪೊಲೀಸ್ ಕಮೀಷನರ್ ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಇದು ಸೈಬರ್ ವಂಚನೆಯ ಒಂದು ತಂತ್ರ. ಇಲ್ಲಿ ವಂಚಕರು ಪೊಲೀಸ್, ಸಿಬಿಐ ಅಥವಾ ಇಡಿ ಅಧಿಕಾರಿಗಳಂತೆ ನಟಿಸಿ, ಬಲಿಪಶುಗಳನ್ನು ವಿಡಿಯೋ ಕಾಲ್‌ನಲ್ಲಿ ಇರುವಂತೆ ಒತ್ತಾಯಿಸುತ್ತಾರೆ. ನೀವು ಮನೆಯಿಂದ ಹೊರಬರುವಂತಿಲ್ಲ, ಯಾರಿಗೂ ಹೇಳುವಂತಿಲ್ಲ ಎಂದು ಹೆದರಿಸಿ 'ಡಿಜಿಟಲ್ ಅರೆಸ್ಟ್' ನಾಟಕವಾಡಿ ಹಣ ಪೀಕುತ್ತಾರೆ.
ಪೊಲೀಸರ ಮನವಿ: "ಯಾವುದೇ ಸರ್ಕಾರಿ ಏಜೆನ್ಸಿಗಳು ವಿಡಿಯೋ ಕಾಲ್ ಮೂಲಕ ನಿಮ್ಮನ್ನು ಬಂಧಿಸುವುದಿಲ್ಲ ಅಥವಾ ಹಣ ವರ್ಗಾಯಿಸುವಂತೆ ಕೇಳುವುದಿಲ್ಲ. ಇಂತಹ ಕರೆಗಳು ಬಂದರೆ ಹೆದರಬೇಡಿ, ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ."