ನವದೆಹಲಿ, ಮಾರ್ಚ್ 20: ಗ್ಯಾಂಗ್‌ಸ್ಟರ್ ಕಪಿಲ್ ಸಾಂಗ್ವಾನ್ ಅಲಿಯಾಸ್ ನಂದು ಜೊತೆ ಗುರುತಿಸಿಕೊಂಡಿದ್ದ ಶಾರ್ಪ್ ಶೂಟರ್ ಮತ್ತು ಶಸ್ತ್ರಾಸ್ತ್ರ ಪೂರೈಕೆದಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಇವರಿಂದ ಎರಡು ನಾಡ ಪಿಸ್ತೂಲ್‌ಗಳು ಮತ್ತು ಐದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. 32 ವರ್ಷದ ಬದರ್ ಇಸ್ಲಾಂ ಎಂಬಾತನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ, ಹರಿಯಾಣದ ಮಹೇಂದರ್ ಗಢದ ನಿವಾಸಿಯಾದ 25 ವರ್ಷದ ಸುಮಿತ್ ಪುನಿಯಾನನ್ನು ದೆಹಲಿಯ ದ್ವಾರಕಾದಲ್ಲಿ ಬಂಧಿಸಲಾಗಿದೆ. ಪೊಲೀಸರು ಆತನಿಂದ ಒಂದು ನಾಡ ನಿರ್ಮಿತ ಸೆಮಿ-ಆಟೋಮ್ಯಾಟಿಕ್ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ಸುಮಿತ್ ಪುನಿಯಾ 2021ರ ಎನ್‌ಕೌಂಟರ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದನೆಂದು ಮತ್ತು ಆತ ಕಪಿಲ್ ಸಾಂಗ್ವಾನ್ ಗ್ಯಾಂಗ್‌ನೊಂದಿಗೆ ನೇರ ಸಂಪರ್ಕ ಹೊಂದಿದ್ದು, ಗ್ಯಾಂಗ್‌ನ ಶಾರ್ಪ್ ಶೂಟರ್ ಆಗಿದ್ದನೆಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಬದರ್ ಇಸ್ಲಾಂ ಕೂಡ ಈ ಗ್ಯಾಂಗ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದವನಾಗಿದ್ದಾನೆ.
ಪೊಲೀಸರ ಪ್ರಕಾರ, ಸುಮಿತ್ ಪುನಿಯಾ 2021ರಲ್ಲಿ ಗ್ಯಾಂಗ್ ಸೇರಿಕೊಂಡಿದ್ದನು. ಆದರೆ ಕಪಿಲ್ ಸಾಂಗ್ವಾನ್ ಮತ್ತು ಸುಮಿತ್ ಪುನಿಯಾ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಬಾಲ್ಯದ ಸ್ನೇಹಿತರಾಗಿದ್ದಾರೆ.
ಜಮ್ಮು ವಿಶ್ವವಿದ್ಯಾಲಯ: ಆಧುನಿಕ ಭಾರತೀಯ ರಾಜಕಾರಣದ ಪಠ್ಯದಲ್ಲಿ ಜಿನ್ನಾ ಹೆಸರು ಸೇರ್ಪಡೆ
ಸುಮಿತ್ ಮತ್ತು ಬದರ್ ಇಸ್ಲಾಂ ಇಬ್ಬರೂ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದರು. ಇವರ ಮೇಲೆ ಹಲವಾರು ಸುಲಿಗೆ (Extortion) ಪ್ರಕರಣಗಳು ದಾಖಲಾಗಿದ್ದವು. ಸುಮಿತ್ ಮತ್ತು ಬದರ್ ಸುದೀರ್ಘ ಅಪರಾಧ ಇತಿಹಾಸವನ್ನು ಹೊಂದಿದ್ದು, ದೀರ್ಘಕಾಲದವರೆಗೆ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಬಂಧ ಹೊಂದಿರುವುದರಿಂದ, ಈ ಬಂಧನವು ಮುಂದಿನ ದಿನಗಳಲ್ಲಿ ಇಡೀ ಗ್ಯಾಂಗ್‌ನ ಸಾಲು ಸಾಲು ಬಂಧನಗಳಿಗೆ ದಾರಿ ಮಾಡಿಕೊಡಬಹುದು ಎಂದು ದೆಹಲಿ ಪೊಲೀಸರು ಸುಳಿವು ನೀಡಿದ್ದಾರೆ.