Skip to main content
ವಿಡಿಯೋ
general

ತಿಂಗಳಲ್ಲೇ ನುಚ್ಚುನೂರಾದ 'ಕೋಟಿ' ವೆಚ್ಚದ ರಸ್ತೆ; ಇದು ಡಾಂಬರೋ ಅಥವಾ ಸಂಡಿಗೆಯೋ?

By Bhavana Gowda
ತಿಂಗಳಲ್ಲೇ ನುಚ್ಚುನೂರಾದ 'ಕೋಟಿ' ವೆಚ್ಚದ ರಸ್ತೆ; ಇದು ಡಾಂಬರೋ ಅಥವಾ ಸಂಡಿಗೆಯೋ?

ಗೌರಿಬಿದನೂರು ತಾಲೂಕಿನ ಇಡುಗೂರು-ಗಾಂಧಿನಗರ ಮಾರ್ಗದ ರಸ್ತೆ ಕಾಮಗಾರಿ ಈಗ ಸಾರ್ವಜನಿಕರ ಹಾಸ್ಯ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.

ಚಿಕ್ಕಬಳ್ಳಾಪುರ: ಸಾರ್ವಜನಿಕರ ತೆರಿಗೆ ಹಣ ಅಕ್ಷರಶಃ ಮಣ್ಣುಪಾಲಾಗುತ್ತಿರುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಈ ರಸ್ತೆಯೇ ಸಾಕ್ಷಿ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಿರ್ಮಾಣವಾದ ರಸ್ತೆ ಕೇವಲ ಒಂದು ತಿಂಗಳಲ್ಲೇ ಕಿತ್ತುಬರುತ್ತಿದ್ದು, ಸ್ಥಳೀಯರ ಆಕ್ರೋಶ ಕಟ್ಟೆ ಒಡೆದಿದೆ.

ರಸ್ತೆಯೋ ಅಥವಾ ಹಪ್ಪಳವೋ?

ಗೌರಿಬಿದನೂರು ತಾಲೂಕಿನ ಇಡುಗೂರು-ಗಾಂಧಿನಗರ ಮಾರ್ಗದ ರಸ್ತೆ ಕಾಮಗಾರಿ ಈಗ ಸಾರ್ವಜನಿಕರ ಹಾಸ್ಯ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ. ಡಾಂಬರು ರಸ್ತೆ ಎಷ್ಟು ಕಳಪೆಯಾಗಿದೆ ಎಂದರೆ, ಜನರು ಕೈಯಿಂದ ಎಳೆದರೆ ರೊಟ್ಟಿ ಅಥವಾ ಸಂಡಿಗೆಯಂತೆ ಕಿತ್ತು ಬರುತ್ತಿದೆ. "ಇದು ರಸ್ತೆಯೋ ಅಥವಾ ಸಂಡಿಗೆ ಹಪ್ಪಳವೋ?" ಎಂದು ಗ್ರಾಮಸ್ಥರು ಇಂಜಿನಿಯರಿಂಗ್ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ.

ಕೋಟಿ ಸುರಿದರೂ ಸಿಗದ ಗುಣಮಟ್ಟ

ಕೇವಲ 3 ಕಿಲೋಮೀಟರ್ ಉದ್ದದ ಈ ರಸ್ತೆ ಕಾಮಗಾರಿಗಾಗಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಹಣವನ್ನು ವ್ಯಯಿಸಲಾಗಿದೆ. ಆದರೆ, ಕಾಮಗಾರಿ ಮುಗಿದು ತಿಂಗಳು ಕಳೆಯುವಷ್ಟರಲ್ಲೇ ರಸ್ತೆಯ ಅಸ್ಥಿಪಂಜರ ಹೊರಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವಿನ 'ಕೈಚಳಕ'ದಿಂದಾಗಿ ಇಂತಹ ಕಳಪೆ ಕೆಲಸ ನಡೆದಿದೆ ಎಂಬುದು ಸಾರ್ವಜನಿಕರ ನೇರ ಆರೋಪ.

ಶಾಸಕ ಪುಟ್ಟಸ್ವಾಮಿಗೌಡ ವಿರುದ್ಧ ಆಕ್ರೋಶ

ರಸ್ತೆ ಅಧೋಗತಿ ತಲುಪಿರುವುದನ್ನು ಕಂಡು ಆಕ್ರೋಶಗೊಂಡ ಗ್ರಾಮಸ್ಥರು, ಸ್ಥಳೀಯ ಶಾಸಕ ಪುಟ್ಟಸ್ವಾಮಿಗೌಡ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಶಾಮೀಲಿನಿಂದಲೇ ಈ ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ.

ಗ್ರಾಮಸ್ಥರ ಆಗ್ರಹಗಳು:

ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ತಕ್ಷಣವೇ 'ಬ್ಲಾಕ್ ಲಿಸ್ಟ್'ಗೆ ಸೇರಿಸಬೇಕು.

ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಗುಣಮಟ್ಟದ ರಸ್ತೆ ನಿರ್ಮಿಸಿಕೊಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗುತ್ತಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.