ಕೊಪ್ಪಳ: "ಮಾಡಿದ್ದುಣ್ಣೋ ಮಹಾರಾಯ" ಎಂಬ ಗಾದೆ ಮಾತು ಈತನ ವಿಷಯದಲ್ಲಿ ಅಕ್ಷರಶಃ ನಿಜವಾಗಿದೆ. ದೇವಸ್ಥಾನದ ನಿಧಿ ಕದ್ದು ಸುಖವಾಗಿರಬಹುದು ಎಂದುಕೊಂಡಿದ್ದ ಕಳ್ಳನಿಗೆ, ದೈವದ ಶಾಪವೋ ಅಥವಾ ಪಾಪಪ್ರಜ್ಞೆಯೋ ಕಾಡತೊಡಗಿದೆ. ಕೊನೆಗೆ ಸಾವು-ಬದುಕಿನ ನಡುವೆ ಹೋರಾಟ ನಡೆಸಿ, ನೆಮ್ಮದಿ ಕಾಣದೆ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ ಶರಣಾಗಿದ್ದಾನೆ.
ಮಾವಿನ ಇಟಗಿಯಲ್ಲಿ ನಡೆದಿದ್ದ ಘಟನೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾವಿನ ಇಟಗಿ ಗ್ರಾಮದ ಪ್ರಸಿದ್ಧ ಸೋಮಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ವರ್ಷಗಳ ಹಿಂದೆ ನಿಧಿ ಕಳ್ಳತನ ನಡೆದಿತ್ತು. ನೂರು ಚಿನ್ನದ ನಾಣ್ಯಗಳು ಮತ್ತು ಬೆಳ್ಳಿ ಕಡಗಗಳ ಆಸೆಗೆ ಬಿದ್ದ ನಾಲ್ವರು ಖದೀಮರು ದೇವಸ್ಥಾನವನ್ನೇ ಅಗೆದು ನಿಧಿಯನ್ನು ದೋಚಿದ್ದರು. ಈ ತಂಡದಲ್ಲಿ ಇಳಕಲ್ಲ ನಗರದ ನಿವಾಸಿ, ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಮೌಲಾಸಾಬ್ ಮುಜಾವರ (45) ಎಂಬಾತನೂ ಸೇರಿದ್ದ.
ನಿಧಿ ಕದ್ದ ಮೇಲೆ ಶುರುವಾಯ್ತು ಸಂಕಷ್ಟ!
ನಿಧಿ ದೋಚಿದ ನಂತರ ಮೌಲಾಸಾಬ್ ಜೀವನದಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ಒಂದೆಡೆ ಮನೆಯಲ್ಲಿ ಸದಾ ಅನಾರೋಗ್ಯ, ಮತ್ತೊಂದೆಡೆ ಅಶಾಂತಿ ಆವರಿಸಿತ್ತು. ಜೊತೆಗಿದ್ದ ಸಹಚರರೇ ಈತನಿಗೆ ಮೋಸ ಮಾಡಿದ್ದರಿಂದ ನಿಧಿಯಲ್ಲಿ ಸರಿಯಾದ ಪಾಲು ಕೂಡ ಸಿಗಲಿಲ್ಲ. ಕದ್ದ ಮಾಲು ಕೈ ಸೇರಲಿಲ್ಲ, ಅತ್ತ ನೆಮ್ಮದಿಯೂ ದಕ್ಕಲಿಲ್ಲ ಎಂದು ಆರೋಪಿ ಪೊಲೀಸರ ಮುಂದೆ ಗೋಳಾಡಿದ್ದಾನೆ.
ಹೃದಯ ಶಸ್ತ್ರಚಿಕಿತ್ಸೆ ಮತ್ತು ಸಾವಿನ ಭೀತಿ
ಇತ್ತೀಚೆಗೆ ಮೌಲಾಸಾಬ್‌ಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡು ಶಸ್ತ್ರಚಿಕಿತ್ಸೆ ನಡೆದಿದೆ. ಅಂದಿನಿಂದ ಆತನಿಗೆ ಸಾವಿನ ಭೀತಿ ಶುರುವಾಗಿದೆ. "ದೇವಸ್ಥಾನದ ನಿಧಿ ಮುಟ್ಟಿದ್ದಕ್ಕೇ ದೇವರು ನನಗೆ ಶಿಕ್ಷೆ ಕೊಡುತ್ತಿದ್ದಾನೆ" ಎಂಬ ಪಾಪಪ್ರಜ್ಞೆ ಆತನನ್ನು ಹಗಲು-ರಾತ್ರಿ ಕಾಡಿದೆ. ದೈವದ ಶಾಪದಿಂದ ಪಾರಾಗಲು ಬೇರೆ ದಾರಿ ಕಾಣದೆ, ತಾನೇ ನಡೆದು ಬಂದು ಕುಷ್ಟಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಆರೋಪಿಯ ಅಳಲು:
"ನಿಧಿ ಕದ್ದ ಮೇಲೆ ಜೀವನ ಅಯೋಮಯವಾಗಿದೆ, ಮನೆಯಲ್ಲಿ ಯಾರಿಗೂ ಸುಖವಿಲ್ಲ, ಸದಾ ಕಾಯಿಲೆ ಕೀಟಲೆ. ಜೊತೆಗಿದ್ದವರು ಮೋಸ ಮಾಡಿದರು, ಈಗ ಸಾವು ಕಣ್ಣಮುಂದೆ ಕಾಣುತ್ತಿದೆ."
ಪೊಲೀಸ್ ತನಿಖೆ ಚುರುಕು:
ಆರೋಪಿ ಮೌಲಾಸಾಬ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈಗ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈತನ ಜೊತೆಗಿದ್ದ ಉಳಿದ ಮೂವರು ಖದೀಮರು ಯಾರು? ದೋಚಿದ ಚಿನ್ನದ ನಾಣ್ಯಗಳು ಈಗ ಎಲ್ಲಿದೆ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಈ 'ಪಶ್ಚಾತ್ತಾಪ' ಪಟ್ಟ ಕಳ್ಳನ ಕಥೆ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.