ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ವಾಹನ ಮಾಲೀಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕವನ್ನು ಶೇ. 3ರಿಂದ 5ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಏಪ್ರಿಲ್ 1, 2026 ರಿಂದ ಈ ಹೊಸ ದರಗಳು ಜಾರಿಗೆ ಬರಲಿವೆ. WPI ಆಧಾರದ ಮೇಲೆ ಪ್ರತಿ ವರ್ಷದಂತೆ ಈ ಬಾರಿಯೂ ದರ ಪರಿಷ್ಕರಣೆ ಮಾಡಲಾಗುತ್ತಿದ್ದು, ಈ ಕುರಿತು ಅಧಿಕೃತ ಆದೇಶ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ.
ಎಷ್ಟು ಹೆಚ್ಚಳವಾಗಲಿದೆ?
ವಾಹನಗಳ ಪ್ರಕಾರವನ್ನು ಆಧರಿಸಿ ಕನಿಷ್ಠ ₹5 ರಿಂದ ಗರಿಷ್ಠ ₹30 ವರೆಗೆ ಶುಲ್ಕ ಏರಿಕೆಯಾಗಲಿದೆ.
ಲಘು ವಾಹನಗಳು (ಕಾರು, ಜೀಪ್): ಬಾಗೇಪಲ್ಲಿ ಅಥವಾ ವಿಮಾನನಿಲ್ದಾಣ ಟೋಲ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಕಣಿಮಿಣಿಕೆ ಮತ್ತು ಗಣಂಗೂರು ಟೋಲ್‌ಗಳಲ್ಲಿ ಪ್ರತಿ ಬಾರಿಗೆ ₹5 ಹೆಚ್ಚಳವಾಗಲಿದೆ.
ಭಾರಿ ವಾಹನಗಳು: ಮಿನಿ ಬಸ್, ಟ್ರಕ್, ಮತ್ತು ಮಲ್ಟಿ ಆಕ್ಸೆಲ್ ವಾಹನಗಳಿಗೆ ₹5 ರಿಂದ ₹30 ವರೆಗೆ ದರ ಏರಿಕೆಯ ಬಿಸಿ ತಟ್ಟಲಿದೆ.
ಮಾಸಿಕ ಪಾಸ್ ದರದಲ್ಲೂ ಏರಿಕೆ
ಕೇವಲ ದಿನನಿತ್ಯದ ಟೋಲ್ ಮಾತ್ರವಲ್ಲದೆ, ಮಾಸಿಕ ಪಾಸ್ ಪಡೆಯುವವರಿಗೂ ಶುಲ್ಕದ ಹೊರೆ ತಪ್ಪಿದ್ದಲ್ಲ.
ಸದ್ಯ ₹3,000 ಇರುವ ಮಾಸಿಕ ಪಾಸ್ ದರವು ಏಪ್ರಿಲ್ 1 ರಿಂದ ₹3,075 ಕ್ಕೆ ಏರಿಕೆಯಾಗಲಿದೆ.
ಗಮನಿಸಿ: ಈ ಮಾಸಿಕ ಪಾಸ್ ಕೇವಲ 200 ಟೋಲ್ ಕ್ರಾಸಿಂಗ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. 200ಕ್ಕಿಂತ ಹೆಚ್ಚು ಬಾರಿ ಸಂಚರಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಯಾವೆಲ್ಲ ಹೆದ್ದಾರಿಗಳಲ್ಲಿ ದರ ಏರಿಕೆ?
ರಾಜ್ಯದ ಪ್ರಮುಖ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಬೆಲೆ ಏರಿಕೆ ಅನ್ವಯವಾಗಲಿದೆ:
ಬೆಂಗಳೂರು-ಮೈಸೂರು (NH 275)
ಬೆಂಗಳೂರು-ಹೈದರಾಬಾದ್ (NH 44)
ಬೆಂಗಳೂರು-ತುಮಕೂರು-ಬೆಳಗಾವಿ (NH 48)
ಬೆಂಗಳೂರು-ಹಾಸನ-ಮಂಗಳೂರು (NH 75)
ಮಂಗಳೂರು-ಉಡುಪಿ-ಕುಂದಾಪುರ (NH 66)
ವಿಜಯಪುರ-ಚಿತ್ರದುರ್ಗ (NH 50/52)
ದರ ಏರಿಕೆಗೆ ಕಾರಣವೇನು?
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008ರ ಅನ್ವಯ ಪ್ರತಿ ವರ್ಷ ಆರ್ಥಿಕ ವರ್ಷದ ಆರಂಭದಲ್ಲಿ ಹಣದುಬ್ಬರಕ್ಕೆ ಅನುಗುಣವಾಗಿ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಈ ಬಾರಿ ಸಗಟು ಬೆಲೆ ಸೂಚ್ಯಂಕದ ಏರಿಕೆಯೇ ಈ ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಹೊಸ ವರ್ಷದ ಆರಂಭದಲ್ಲೇ ಪ್ರಯಾಣ ದರ ದುಬಾರಿಯಾಗುತ್ತಿರುವುದು ಸಾಮಾನ್ಯ ಜನರಿಗೆ ಹಾಗೂ ಸರಕು ಸಾಗಣೆದಾರರಿಗೆ ಸ್ವಲ್ಪಮಟ್ಟಿನ ಆರ್ಥಿಕ ಹೊರೆಯಾಗಿ ಪರಿಣಮಿಸುವುದು ಗ್ಯಾರಂಟಿ.