ಚಿಕ್ಕಬಳ್ಳಾಪುರ: ಸಿನಿಮಾ ಶೈಲಿಯ ನಾಟಕವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಮುನೇಶ್ವರ ದೇವಾಲಯದ ಬಳಿ ನಡೆದಿದೆ. ಮೊದಲ ಹೆಂಡತಿಗೆ ತಿಳಿಯದಂತೆ ಎರಡನೇ ಮದುವೆಯಾಗಲು ಸಜ್ಜಾಗಿದ್ದ ಪತಿರಾಯನಿಗೆ, ಆಕೆಯ ದಿಢೀರ್ ಎಂಟ್ರಿ ಅಕ್ಷರಶಃ ಕಕ್ಕಬಿಕ್ಕಿಯಾಗುವಂತೆ ಮಾಡಿದೆ.
ಏನಿದು ಘಟನೆ?
ಆಂಧ್ರಪ್ರದೇಶದ ಕದರಿ ಮೂಲದ ಸುರೇಶ್ ಎಂಬಾತನೇ ಈ ಹೈಡ್ರಾಮಾದ ಕೇಂದ್ರಬಿಂದು. ಸುರೇಶ್‌ಗೆ ಸುಮಾರು 20 ವರ್ಷಗಳ ಹಿಂದೆಯೇ ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಗ್ರಾಮದ ಮಹಿಳೆಯೊಂದಿಗೆ ವಿವಾಹವಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ದಂಪತಿಗಳ ನಡುವೆ ಕೌಟುಂಬಿಕ ಕಲಹ ಉಂಟಾಗಿ, ಆಕೆ ಪತಿಯಿಂದ ದೂರವಾಗಿದ್ದರು.
ಪತ್ನಿಯಿಂದ ದೂರವಿದ್ದ ಸುರೇಶ್, ಮೊದಲ ಹೆಂಡತಿಗೆ ಡಿವೋರ್ಸ್ ನೀಡದೆ ಅಥವಾ ಆಕೆಗೆ ಮಾಹಿತಿ ನೀಡದೆ ಗುಟ್ಟಾಗಿ ಎರಡನೇ ಮದುವೆಗೆ ಸಜ್ಜಾಗಿದ್ದ. ಇಂದು ಕೋಡಗುರ್ಕಿ ಗ್ರಾಮದ ಮುನೇಶ್ವರ ದೇವಾಲಯದಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿದ್ದವು.
ಮಂಟಪಕ್ಕೆ ಎಂಟ್ರಿ ಕೊಟ್ಟ ಮೊದಲ ಪತ್ನಿ!
ಸುರೇಶ್ ಎರಡನೇ ಮದುವೆಯಾಗುತ್ತಿರುವ ವಿಷಯ ತಿಳಿದ ಮೊದಲ ಪತ್ನಿ, ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕೂಡಲೇ ತನ್ನ ಅಕ್ಕಪಕ್ಕದವರನ್ನು ಮತ್ತು ಸಂಬಂಧಿಕರನ್ನು ಕರೆದುಕೊಂಡು ಮದುವೆ ಮಂಟಪಕ್ಕೆ ದಿಢೀರ್ ಎಂಟ್ರಿ ಕೊಟ್ಟಿದ್ದಾರೆ. ಸಕಲ ಸಿದ್ಧತೆಗಳೊಂದಿಗೆ ಮದುವೆ ಗಂಡಾಗಿ ಕುಳಿತಿದ್ದ ಸುರೇಶ್, ಮೊದಲ ಹೆಂಡತಿಯನ್ನು ಕಂಡು ದಿಕ್ಕುತೋಚದಂತಾಗಿದ್ದಾನೆ. ಸ್ಥಳದಲ್ಲೇ ಗಲಾಟೆ ಆರಂಭವಾಗುತ್ತಿದ್ದಂತೆ ಮದುವೆಗೆ ಬಂದಿದ್ದ ಅತಿಥಿಗಳು ಕೂಡ ದಂಗಾಗಿದ್ದಾರೆ. ಮೊದಲ ಪತ್ನಿಯ ತೀವ್ರ ವಿರೋಧದ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಎರಡನೇ ಮದುವೆ ಅರ್ಧಕ್ಕೇ ನಿಂತುಹೋಗಿದೆ.
ಪೊಲೀಸ್ ಮೆಟ್ಟಿಲೇರಿದ ಪ್ರಕರಣ
ಘಟನೆಯ ನಂತರ ನೊಂದ ಮೊದಲ ಪತ್ನಿ ತನ್ನ ಪತಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಈ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊದಲ ಪತ್ನಿ ಜೀವಂತವಾಗಿರುವಾಗ ಮತ್ತು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾಗುವುದು ಅಪರಾಧವಾಗಿದ್ದು, ಪೊಲೀಸರು ಈಗ ಸುರೇಶ್ ವಿರುದ್ಧ ತನಿಖೆ ಕೈಗೊಂಡಿದ್ದಾರೆ.