ರಾಮನಗರ: ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಉಪಚುನಾವಣೆ ಮತ್ತು ಮೇಕೆದಾಟು ಯೋಜನೆ ಕುರಿತಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶನಿವಾರ ರಾಮನಗರದ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇರಳಕ್ಕೆ 10 ಕೋಟಿ ನೆರವು: 'ಕುರ್ಚಿ ಉಳಿಸಿಕೊಳ್ಳಲು ರಾಜ್ಯದ ಹಣ'
ಕೇರಳದ ಭೂಕುಸಿತ ಸಂತ್ರಸ್ತರಿಗೆ ರಾಜ್ಯ ಸರ್ಕಾರ 10 ಕೋಟಿ ರೂ. ಅನುದಾನ ನೀಡಿರುವುದನ್ನು ಪ್ರಶ್ನಿಸಿದ ನಿಖಿಲ್, "ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇರಳದ ಮುಖ್ಯಮಂತ್ರಿಯೋ?" ಎಂದು ಕೇಳಿದರು. "ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿ ರೈತರು ಕಣ್ಣೀರು ಹಾಕಿದಾಗ ಸಿದ್ದರಾಮಯ್ಯ ಅವರಿಗೆ ಅವರ ಕೂಗು ಕೇಳಿಸಲಿಲ್ಲ. ಕೇರಳದಲ್ಲಿ ದುರಂತ ಸಂಭವಿಸಿದರೆ ಅಲ್ಲಿನ ಸಿಎಂ ಪರಿಹಾರ ಘೋಷಿಸಬೇಕು. ಆದರೆ, ಇಲ್ಲಿನ ಮುಖ್ಯಮಂತ್ರಿಗಳು ತಮ್ಮ ಹೈಕಮಾಂಡ್ ವಿಶ್ವಾಸ ಗಳಿಸಲು ಮತ್ತು ಕುರ್ಚಿ ಭದ್ರಪಡಿಸಿಕೊಳ್ಳಲು ರಾಜ್ಯದ ಜನರ ಹಣವನ್ನು ಅಲ್ಲಿಗೆ ನೀಡುತ್ತಿದ್ದಾರೆ," ಎಂದು ಟೀಕಿಸಿದರು.
ಉಪಚುನಾವಣೆ ಪ್ರಚಾರದಲ್ಲಿ ಹೆಚ್‌ಡಿಕೆ ಭಾಗಿ
ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ಕುರಿತು ಮಾತನಾಡಿದ ಅವರು, "ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿರುವುದರಿಂದ ಹೆಚ್.ಡಿ. ಕುಮಾರಸ್ವಾಮಿ ಅವರು ಅಲ್ಲಿ ಕಾರ್ಯನಿರತರಾಗಿದ್ದಾರೆ. ಅಧಿವೇಶನ ಮುಗಿದ ಕೂಡಲೇ ಅವರು ಉಪಚುನಾವಣೆ ಪ್ರಚಾರದ ಕಣಕ್ಕೆ ಇಳಿಯಲಿದ್ದಾರೆ," ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ:
ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಪಡೆಯುವ ವಿಚಾರವಾಗಿ ಮಾತನಾಡಿದ ನಿಖಿಲ್, "ಎತ್ತಿನ ಹೊಳೆ ಯೋಜನೆಗೆ ಮರುಜೀವ ನೀಡಲು ದೇವೇಗೌಡರು ಸದನದಲ್ಲಿ ಅಂಗಲಾಚಿ ಬೇಡಿದ್ದಾರೆ. ಅವರ ಹಿರಿತನಕ್ಕೆ ಗೌರವ ನೀಡಿ ಕೇಂದ್ರ ನಾಯಕರು ಕ್ಲಿಯರೆನ್ಸ್ ನೀಡಿದ್ದಾರೆ. ಮೇಕೆದಾಟು ಯೋಜನೆಗೂ ಅನುಮತಿ ಕೊಡಿಸಲು ಹೆಚ್‌ಡಿಡಿ ಹಾಗೂ ಹೆಚ್‌ಡಿಕೆ ಬದ್ಧರಾಗಿದ್ದಾರೆ. ಆದರೆ, ಅದಕ್ಕೂ ಮೊದಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಂದ ಎನ್‌ಒಸಿ (NOC) ತರಲಿ. ಮಾರನೇ ದಿನವೇ ಕೇಂದ್ರದ ಅನುಮತಿಗಾಗಿ ನಮ್ಮ ನಾಯಕರು ಹೋರಾಟ ಮಾಡುತ್ತಾರೆ," ಎಂದು ಸವಾಲು ಹಾಕಿದರು.