Skip to main content
ವಿಡಿಯೋ
crime

ಕಲಬುರಗಿಯಲ್ಲಿ ಭೀಕರ ಹತ್ಯೆ: ಪತ್ನಿಯ ಕತ್ತು ಕೊಯ್ದು, ದೇಹದ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದ ಪತಿ ಅರೆಸ್ಟ್!

By Bhavana Gowda
ಕಲಬುರಗಿಯಲ್ಲಿ ಭೀಕರ ಹತ್ಯೆ: ಪತ್ನಿಯ ಕತ್ತು ಕೊಯ್ದು, ದೇಹದ ಮೇಲೆ ಕಾರು ಹತ್ತಿಸಿ ಪರಾರಿಯಾಗಿದ್ದ ಪತಿ ಅರೆಸ್ಟ್!

ಮಹಾರಾಷ್ಟ್ರದ ಬಾರಾಮತಿ ಮೂಲದ ಅಕ್ಷಯ್ ಜಾಧವ್ ಎಂಬಾತ ತನ್ನ ಪತ್ನಿ ಶೈಲಾ (35) ಎಂಬಾಕೆಯನ್ನು ಕಾರಿನಲ್ಲಿ ಕರೆತಂದು ಈ ಕೃತ್ಯ ಎಸಗಿದ್ದಾನೆ.

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಹೊರವಲಯದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಕಾರಿನಲ್ಲಿ ಕರೆತಂದ ಮಹಿಳೆಯನ್ನು ರಸ್ತೆ ಬದಿಯ ಜಮೀನಿನಲ್ಲಿ ಕುರುಪಿಯಿಂದ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಭೀಕರ ದೃಶ್ಯವು ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆಯ ವಿವರ: ಸಾರ್ವಜನಿಕರ ಮುಂದೆಯೇ ಕಗ್ಗೊಲೆ!

ಮಹಾರಾಷ್ಟ್ರದ ಬಾರಾಮತಿ ಮೂಲದ ಅಕ್ಷಯ್ ಜಾಧವ್ ಎಂಬಾತ ತನ್ನ ಪತ್ನಿ ಶೈಲಾ (35) ಎಂಬಾಕೆಯನ್ನು ಕಾರಿನಲ್ಲಿ ಕರೆತಂದು ಈ ಕೃತ್ಯ ಎಸಗಿದ್ದಾನೆ. ಬಳೂರ್ಗಿ ಗ್ರಾಮದ ಮುಖ್ಯ ರಸ್ತೆಯ ಪಕ್ಕದ ಜಮೀನಿನಲ್ಲಿ ಕಾರು ನಿಲ್ಲಿಸಿದ ಆರೋಪಿ, ಸಾರ್ವಜನಿಕರು ನೋಡನೋಡುತ್ತಿದ್ದಂತೆಯೇ ಪತ್ನಿಯ ಕತ್ತು ಕೊಯ್ದಿದ್ದಾನೆ.

ಅಷ್ಟಕ್ಕೇ ನಿಲ್ಲದ ಈತ, ಮಹಿಳೆ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿಕೊಳ್ಳಲು ಆಕೆಯ ದೇಹದ ಮೇಲೆ ಕಾರು ಹತ್ತಿಸಿ ಎಸ್ಕೇಪ್ ಆಗಿದ್ದನು. ಕಾರಿನಲ್ಲಿ ಅಕ್ಷಯ್ ಜೊತೆಗೆ ಇನ್ನೂ ನಾಲ್ಕೈದು ಮಂದಿ ಇದ್ದರು ಎನ್ನಲಾಗಿದೆ.

ಮೊಬೈಲ್‌ನಲ್ಲಿ ಸೆರೆಯಾಯ್ತು ಲೈವ್ ಕೊಲೆ ದೃಶ್ಯ!

ಈ ಭೀಕರ ಹತ್ಯೆ ನಡೆಯುವಾಗ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಆದರೆ, ದುರದೃಷ್ಟವಶಾತ್ ಯಾರೊಬ್ಬರೂ ಮಹಿಳೆಯ ನೆರವಿಗೆ ಧಾವಿಸದೆ ಅಮಾನವೀಯತೆ ಮೆರೆದಿದ್ದಾರೆ. ಜನರು ನೋಡುತ್ತಲೇ ಇದ್ದರೂ ಆರೋಪಿ ರಾಜಾರೋಷವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಒಂದು ಗಂಟೆಯಲ್ಲೇ ಆರೋಪಿಗಳ ಬಂಧನ

ಘಟನೆ ನಡೆದ ತಕ್ಷಣ ಅಫಜಲಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ, ಕೊಲೆ ನಡೆದ ಕೇವಲ ಒಂದು ಗಂಟೆಯ ಒಳಗಾಗಿ ಪತಿ ಅಕ್ಷಯ್ ಜಾಧವ್ ಸೇರಿದಂತೆ ಇತರ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.