Skip to main content
ವಿಡಿಯೋ
politics

ಪೋಷಕರಿಗೆ ಭರ್ಜರಿ ಸಿಹಿಸುದ್ದಿ: ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ, 60 ದಿನಗಳ ವಿನಾಯಿತಿ ಘೋಷಿಸಿದ ಮಧು ಬಂಗಾರಪ್ಪ!

By Bhavana Gowda
ಪೋಷಕರಿಗೆ ಭರ್ಜರಿ ಸಿಹಿಸುದ್ದಿ: ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ, 60 ದಿನಗಳ ವಿನಾಯಿತಿ ಘೋಷಿಸಿದ ಮಧು ಬಂಗಾರಪ್ಪ!

ವಿಧಾನಸಭೆಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು. "ಈ ಹಿಂದೆ ಒಂದನೇ ತರಗತಿಗೆ ಸೇರಲು ಮಗುವಿಗೆ 6 ವರ್ಷ ಕಡ್ಡಾಯವಾಗಿ ತುಂಬಿರಬೇಕು ಎಂಬ ನಿಯಮವಿತ್ತು.

ಬೆಂಗಳೂರು: ರಾಜ್ಯದ ಪೋಷಕರಲ್ಲಿ ಮನೆಮಾಡಿದ್ದ ಶಾಲಾ ದಾಖಲಾತಿ ವಯೋಮಿತಿಯ ಆತಂಕಕ್ಕೆ ಸರ್ಕಾರ ತೆರೆ ಎಳೆದಿದೆ. ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಕಡ್ಡಾಯವಾಗಿದ್ದ 6 ವರ್ಷಗಳ ವಯೋಮಿತಿಯಲ್ಲಿ ಈಗ 60 ದಿನಗಳ (2 ತಿಂಗಳು) ವಿನಾಯಿತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

5 ವರ್ಷ 10 ತಿಂಗಳ ಮಕ್ಕಳಿಗೂ ಪ್ರವೇಶಾವಕಾಶ

ವಿಧಾನಸಭೆಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು. "ಈ ಹಿಂದೆ ಒಂದನೇ ತರಗತಿಗೆ ಸೇರಲು ಮಗುವಿಗೆ 6 ವರ್ಷ ಕಡ್ಡಾಯವಾಗಿ ತುಂಬಿರಬೇಕು ಎಂಬ ನಿಯಮವಿತ್ತು. ಇದರಿಂದ ಸಾವಿರಾರು ಪೋಷಕರಿಗೆ ತೊಂದರೆಯಾಗುತ್ತಿತ್ತು. ಪೋಷಕರ ಈ ಮನವಿಯನ್ನು ಪುರಸ್ಕರಿಸಿ, ಈಗ 5 ವರ್ಷ 10 ತಿಂಗಳು ತುಂಬಿರುವ ಮಕ್ಕಳಿಗೂ ಒಂದನೇ ತರಗತಿಗೆ ದಾಖಲಾಗಲು ಅನುಮತಿ ನೀಡುತ್ತಿದ್ದೇವೆ," ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ

ಈ ಬದಲಾವಣೆಯನ್ನು ಜಾರಿಗೆ ತರಲು ಸರ್ಕಾರ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಕೇವಲ ಕಾನೂನಿನಲ್ಲಷ್ಟೇ ಅಲ್ಲದೆ, ದಾಖಲಾತಿ ಪ್ರಕ್ರಿಯೆ ನಡೆಯುವ ಇಲಾಖೆಯ ತಂತ್ರಾಂಶದಲ್ಲೂ (Software) ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

LKG, UKG ದಾಖಲಾತಿ ಗೊಂದಲಕ್ಕೂ ಪರಿಹಾರ

ಒಂದನೇ ತರಗತಿಯ ಜೊತೆಗೆ ಎಲ್‌ಕೆಜಿ (LKG) ಮತ್ತು ಯುಕೆಜಿ (UKG) ಮಕ್ಕಳ ದಾಖಲಾತಿಯಲ್ಲೂ ವಯೋಮಿತಿಯ ತೊಂದರೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಿ, ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಸದನದಲ್ಲಿ ತಿಳಿಸಲಾಯಿತು.

ಶೀಘ್ರದಲ್ಲೇ ಅಧಿಕೃತ ಆದೇಶ

ಶಾಸಕ ಅರವಿಂದ್ ಬೆಲ್ಲದ್ ಅವರು ಇದನ್ನು ಕೇವಲ ಒಂದು ವರ್ಷದ ವಿನಾಯಿತಿ ಮಾಡದೆ ಕಡ್ಡಾಯ ಕಾನೂನಾಗಿ ಜಾರಿಗೆ ತರಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಅವರು, ಇಲಾಖೆಯಿಂದ ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಪೋಷಕರಿಗೆ ನೆಮ್ಮದಿ ಸಿಕ್ಕಂತಾಗಿದೆ.