ಬೆಂಗಳೂರು :
ಕಳೆದ ವಾರ ಸಂಪನ್ನಗೊಂಡ ವಿಧಾನ ಮಂಡಲದ ಬಜೆಟ್ ಅಧಿವೇಶನ ಹಲವು ದೃಷ್ಟಿಕೋನಗಳಿಂದ ಮಹತ್ವಪೂರ್ಣ ಹಾಗೂ ವ್ಯಾಖ್ಯಾನಕ್ಕೆ ಅರ್ಹ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಇಷ್ಟು ಸುದೀರ್ಘ ಅವಧಿಗೆ ಅಂದರೆ ಮೂರು ವಾರಗಳ ಕಾಲ ಅಧಿವೇಶನ ನಡೆದಿದ್ದು ಕಡಿಮೆ. ಮೊದಲೆಲ್ಲ ಬಜೆಟ್ ಅಧಿವೇಶನದಲ್ಲಿ ಇಲಾಖಾವಾರು ಅಭಿಯಾಚನೆಯ ಮೇಲೆ ಚರ್ಚೆ ನಡೆದು ನಂತರ ಸದನ ಬಜೆಟ್ ಗೆ ಅನುಮೋದನೆ ನೀಡುತ್ತಿತ್ತು. ಕಾಗೋಡು ತಿಮ್ಮಪ್ಪನವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ ಒಮ್ಮೆ ಈ ಸಂಪ್ರದಾಯವನ್ನು ಮರಳಿ ತಂದಿದ್ದರು. ಅದಾದ ಬಳಿಕ ಇಲಾಖಾವಾರು ಚರ್ಚೆಯಾಗಲಿ, ಸುದೀರ್ಘ ಅವಧಿಗೆ ಅಧಿವೇಶನ ನಡೆಸಿ ಕಲಾಪದ ಬಿಸಿ ಕಾಯ್ದುಕೊಂಡಿದ್ದಾಗಲಿ ಕಡಿಮೆ. ಹೀಗಾಗಿ ಹೊಸ ತಲೆಮಾರಿನ ಶಾಸಕರಿಗೆ ಕಲಾಪದ ಈ ಓಘಕ್ಕೆ ಹೊಂದಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ. ಹೀಗಾಗಿ ಈ ಬಾರಿ ನಡೆದ ಕಲಾಪ ಒಟ್ಟಾರೆ ಗುಣಮಟ್ಟದ ದೃಷ್ಟಿಯಿಂದ ಶ್ರೇಷ್ಠವಾಗದೇ ಇದ್ದರೂ ಕೆಲವೊಂದು ವಿದ್ಯಮಾನಗಳ ದೃಷ್ಟಿಯಿಂದ ಮಹತ್ವಪೂರ್ಣ ಎನಿಸಿದೆ.
ಕಲಾಪದ ಮಧ್ಯಭಾಗದಲ್ಲಿ ನಡೆದ ಕೆಪಿಎಸ್ ಸಿ ಹಗರಣದ ಬಗ್ಗೆ ನಡೆದ ಚರ್ಚೆ ಇತ್ತೀಚಿನ ದಿನಗಳಲ್ಲಿ ನಡೆದ ಒಂದು ಮಹತ್ವದ ಘಟ್ಟ. ಬಿಜೆಪಿಯ ವಿ.ಸುನೀಲ್ ಕುಮಾರ್ ಹಾಗೂ ಎಸ್.ಸುರೇಶ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನುವ ರೀತಿಯಲ್ಲಿ ಒಂದು ಸಂಸದೀಯ ಡಿಬೇಟ್ ಗೆ ಚಾಲನೆ ನೀಡಿದರು. ಇಬ್ಬರ ವಾದದಲ್ಲೂ ನೈಜ ಸಾರ್ವಜನಿಕ ಕಾಳಜಿ ಇತ್ತು. ಒಮ್ಮೊಮ್ಮೆ ಹುತ್ತವನ್ನು ಬಡಿದಂತೆ ಆಗಿ ಬಿಡುವ ಇಂತ ಚರ್ಚೆಗಳಿಗೆ ಆಡಳಿತ ಪಕ್ಷದ ಪ್ರತಿಕ್ರಿಯೆ ನಾನಾ ಕಾರಣಗಳಿಗಾಗಿ ನೀರಸವಾಗಿ ಬಿಡುತ್ತದೆ. ಆದರೆ ಈ ಬಾರಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಕೃಷ್ಣಬೈರೇಗೌಡ ವಿಪಕ್ಷದ ಕಾಳಜಿಗೆ ಪೂರಕವಾಗಿ ಸ್ಪಂದಿಸಿದರು. ಇದಾದ ಬಳಕ ಅಧಿವೇಶನದ ಕೊನೆಯ ದಿನ ನಡೆದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಮುನಿರತ್ನ ನಡುವೆ ನಡೆದ ವೈಯಕ್ತಿಕ ಕದನ ಹಾಗೂ ಐಪಿಎಲ್ ಟಿಕೆಟ್ ಗಾಗಿ ಕೆಲ ಶಾಸಕರು ಇಟ್ಟ ನೆಗೆಟಿವ್ ಚರ್ಚೆಗಳು ಸಾರ್ವಜನಿಕರ ಗಮನ ಸೆಳೆದವು. ಈ ನೇತ್ಯಾತ್ಮಕ ಬೆಳವಣಿಗೆ ಸ್ಪೀಕರ ಖಾದರ್ ನಡೆಸಿದ ಅಹೋರಾತ್ರಿ ಕಲಾಪದ ಶ್ರಮವನ್ನೇ ನುಂಗಿ ಹಾಕಿಬಿಟ್ಟಿತು.
ಇದರ ಮಧ್ಯೆ ಕರ್ನಾಟಕ ವಿಧಾನಸಭೆಯ ಮಟ್ಟಿಗೆ ಕೆಲ ಗಟ್ಟಿ ಸದನ ಶೂರರ ಪಟ್ಟುಗಳೂ ಅನಾವರಣಗೊಂಡವು. ಅವುಗಳಲ್ಲಿ ಗಮನಿಸಲೇಬೇಕಾದದ್ದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರ ಫರ್ಫಾರೆನ್ಸ್. ಸದನದ ನಿಯಮ, ಶಿಸ್ತು, ಸಂಪ್ರದಾಯ, ಶ್ರದ್ಧೆಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಸುನೀಲ್ ಕುಮಾರ್ ಎತ್ತಿದ ಕೆಲ ವಿಚಾರಗಳು ಮಾರ್ಮಿಕವಾಗಿತ್ತು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸದನಕ್ಕೆ ನೀಡಿದ ತಪ್ಪು ಉತ್ತರವನ್ನು ಗಟ್ಟಿಯಾಗಿ ಹಿಡಿದುಕೊಂಡ ಸುನೀಲ್, ಸ್ಪೀಕರ್ ಅವರನ್ನೂ ತರಾಟೆಗೆ ತೆಗೆದುಕೊಂಡು ಪ್ರದರ್ಶಿಸಿದ ಕಲಾಪ ವೈಖರಿ ಹಳೆಯ ತಲೆಮಾರಿನ ನಂಜೇಗೌಡ, ವಾಟಾಳ್ ನಾಗರಾಜ್, ಮಾಧುಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಮೊದಲಾದವರ ಜಿಗುಟುತನವನ್ನು ಮತ್ತೆ ಸ್ಮರಣೆಗೆ ತಂದಿತ್ತು. ಅದರ ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ನೇರಾನೇರ ಟೀಕಿಸಿದ ಸುನೀಲ್ ಸುತ್ತಲಿರುವ ಭಜಕರಿಂದ ಸ್ತುತಿಸಿಕೊಂಡ ಮಾತ್ರಕ್ಕೆ ನೀವು ದೇವರಾಜ್ ಅರಸು ಆಗಲಾರಿರಿ ಎಂಬ ಮೊನಚು ಟೀಕೆಗೆ ಆಡಳಿತ ಪಕ್ಷದಲ್ಲೂ ಉತ್ತರವಿರಲಿಲ್ಲ. ಒಳಮೀಸಲು ವರ್ಗೀಕರಣದ ವಿಚಾರದಲ್ಲಿ ದಲಿತ ಸಮುದಾಯದ ಶಾಸಕರು ಹಾಗೂ ಸಚಿವರೇ ಮೌನಕ್ಕೆ ಶರಣಾದ ಸಂದರ್ಭದಲ್ಲಿ ಸುನೀಲ್ ಕುಮಾರ್ ಈ ವಿಚಾರ ಪ್ರಸ್ತಾಪಿಸಿ ಶೋಷಿತ ಸಮುದಾಯದ ನೋವಿಗೆ ಧ್ವನಿಯಾದರು. ಸದನದಲ್ಲಿ ಚರ್ಚಿತವಾಗಬೇಕಿರುವುದು ಜನಸಾಮಾನ್ಯರ ವಿಚಾರ ಎಂಬ ವಾದಕ್ಕೆ ಅವರು ಈ ಬಾರಿಯೂ ಸೇತುವೆಯಾದರು.
ಇನ್ನು ಮೊದಲ ಬಾರಿಗೆ ಶಾಸಕರಾದ ಚನ್ನಬಸಪ್ಪ, ಧೀರಜ್ ಮುನಿರಾಜ ಅವರ ಸ್ಪಷ್ಟತೆ ಒಂದೆಡೆಯಾದರೆ, ಸದಾ ಸದನದ ಶಿಷ್ಟಾಚಾರ ಮೀರಿ ನಡೆಯುತ್ತಿದ್ದ ಅರಸಿಕೆರೆಯ ಶಿವಲಿಂಗೇಗೌಡ ಟ್ರ್ಯಾಕ್ ತಪ್ಪದೇ ಇದ್ದಿದ್ದೇ ಸೋಜಿಗ. ಕಳೆದ ಬಾರಿ ಮಂಗಳೂರ ಭಾಗದ ಶಾಸಕರು ಕೊಟ್ಟ ಪೆಟ್ಟಿನ ರುಚಿ ಅವರಿಗೆ ಇನ್ನೂ ನೆನಪಿನಲ್ಲಿ
ಇದ್ದಂತೆ ಕಾಣುತ್ತಿತ್ತು. ಇನ್ನು ಲಿಖಿತವಾಗಿ ಸದನದಲ್ಲಿ ಮಂಡಿಸಬೇಕಿದ್ದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಒದಗಿಸದ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಖುದ್ದು ಸಭಾತ್ಯಾಗ ನಡೆಸಿದ್ದು ವಿಧಾನಮಂಡಲದ ಇತಿಹಾಸದಲ್ಲಿಯೇ ಹೊಸ ದಾಖಲೆ. ಜತೆಗೆ ಸರ್ಕಾರಕ್ಕೆ ಖಾದರ್ ಬಿಸಿಮುಟ್ಟಿಸಿದ ರೀತಿ ಶ್ಲಾಘನೀಯವೂ ಹೌದು.
ವಿಪಕ್ಷ ನಾಯಕ ಆರ್.ಅಶೋಕ ಈ ಬಾರಿ ಹೊಸ ಹೊಸ ದಾಖಲೆ ಸಮೇತ ಸರ್ಕಾರದ ವೈಫಲ್ಯ ಅನಾವರಣಗೊಳಿಸಿದರು. ಬೆಂಗಳೂರು ವಿಚಾರದಲ್ಲಿ ಪ್ರೌಢ ಡಿಬೇಟ್ ನಡೆಸಿದರೆ, ಅದಕ್ಕೆ ಡಿ.ಕೆ.ಶಿವಕುಮಾರ್ ಅವರ ಉತ್ತರವೂ ಹದವಾಗಿತ್ತು. ಇನ್ನು ಸದನದಲ್ಲಿ ಬಜೆಟ್ ಮೇಲೆ ಸುದೀರ್ಘ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಔಟ್ ಆಫ್ ದಿ ಬಾಕ್ಸ್ ಮಾತಾಡಿದ್ದೇ ಹೆಚ್ಚು. ಹೈಕಮಾಂಡ್ ಒಪ್ಪಿದರೆ ನಾನೇ ಮತ್ತೆರಡು ಬಜೆಟ್ ಮಂಡಿಸುತ್ತೇನೆ ಎಂದಿದ್ದು ಸಣ್ಣ ಸಂದೇಶವಲ್ಲ.
ಇದನ್ನು ಬಿಟ್ಟರೆ ಸದನದಲ್ಲಿ ಎದ್ದು ಕಂಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅನ್ಯಮನಸ್ಕತೆ. ಒಬ್ಬ ಜವಾಬ್ದಾರಿಯುತ ಪಕ್ಷದ ರಾಜ್ಯಾಧ್ಯಕ್ಷರಾದ ಅವರು ಕಲಾಪದಲ್ಲಿ ಕುಳಿತು ತನ್ನ ಶಾಸಕರನ್ನು ಹುರಿದುಂಬಿಸುವ ಜವಾಬ್ದಾರಿಯಲ್ಲಿ ಮತ್ತೆ ವಿಫಲರಾದರು. ನಡೆ - ನುಡಿಯಲ್ಲಿ ತಮ್ಮ ತಂದೆ ಯಡಿಯೂರಪ್ಪನವರನ್ನು ಅನುಕರಿಸುವ ಅವರು ಸದನದ ವಿಚಾರಕ್ಕೆ ಬಂದಾಗ ತಟಸ್ಥರಾಗುವ ಪರಿಯೇ ಪ್ರಶ್ನಾರ್ಹ.
ಹಲವು ವಿಚಾರಗಳ ಮಧ್ಯೆ ಕೊನೆಯ ಎರಡು ದಿನ ಕುತೂಹಲ ಸೃಷ್ಟಿಸಿದ್ದು ಸ್ಪೀಕರ್ ಖಾದರ್ ಅವರ ನಡೆ. ವರ್ಷದ ಮಧ್ಯಭಾಗದಲ್ಲಿ ಅವರು ನಡೆಸಿದ ಫೋಟೋ ಶೂಟ್ ಖಾದರ್ ಸಂಪುಟ ಸೇರುತ್ತಾರೆಯೋ ಅಥವಾ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಗ್ಯಾರಂಟಿ ಎಂಬುದರ ಸೂಚನೆಯೋ ಎಂಬ ಪ್ರಶ್ನೆಯನ್ನು ಜನಮಾನಸದಲ್ಲಿ ಬಿತ್ತಿದಂತೂ ಸ್ಪಷ್ಟ !
..........
ಬರಹ : ಸುಕೃತ್ ಗೌಡ, ಬೆಂಗಳೂರು.