ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಗಲಾಟೆಗಳು ಹೊಸದೇನಲ್ಲ. ಆದರೆ ಇಲ್ಲೊಂದು ಕಡೆ ಗ್ಯಾಸ್ ಮತ್ತು ವಾಟರ್ ಬಿಲ್ ವಿಚಾರವಾಗಿ ಶುರುವಾದ ಜಗಳ ತಾರಕಕ್ಕೇರಿ, ರಕ್ತಪಾತದಲ್ಲಿ ಅಂತ್ಯವಾಗಿರುವ ಭೀಕರ ಘಟನೆ ನಡೆದಿದೆ. ಬೆಂಗಳೂರಿನ ಜೀವನಭೀಮಾ ನಗರದ ಕೋಡಿಹಳ್ಳಿಯಲ್ಲಿ ಮಾರ್ಚ್ 29 ರಂದು ಈ ಅಮಾನವೀಯ ಘಟನೆ ನಡೆದಿದ್ದು, ಬಾಡಿಗೆದಾರರ ಮೇಲೆ ಮಾಲೀಕರು ಚಾಕು ಮತ್ತು ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯ ವಿವರ: ಏನಿದು ಗಲಾಟೆ?
ಕಳೆದ ಒಂದು ವಾರದ ಹಿಂದೆಯಷ್ಟೇ ನರೇಶ್, ಅವರ ತಮ್ಮ ಸಚಿನ್ ಮತ್ತು ಸಹೋದರಿ ರೇಖಾ ಅವರು ಕೋಡಿಹಳ್ಳಿಯಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು. ಆದರೆ ವಾರ ಕಳೆಯುವುದರೊಳಗೆ ಮಾಲೀಕರ ಕಿರಿಕಿರಿ ಶುರುವಾಗಿತ್ತು.
"ಗ್ಯಾಸ್ ರೇಟ್ ಜಾಸ್ತಿ ಆಗಿದೆ, ವಾಟರ್ ಬಿಲ್ ಕೂಡ ಹೆಚ್ಚು ಕೊಡಬೇಕು" ಎಂದು ಮನೆ ಮಾಲೀಕರಾದ ಶೋಭಾ ಮತ್ತು ದೇವರಾಜ್ ತಗಾದೆ ತೆಗೆದಿದ್ದಾರೆ. ಕೇಳಿದಷ್ಟು ಹಣ ಕೊಡದಿದ್ದರೆ ತಕ್ಷಣವೇ ಮನೆ ಖಾಲಿ ಮಾಡುವಂತೆ ಮಾಲೀಕರು ದಬಾಯಿಸಿದ್ದಾರೆ ಎನ್ನಲಾಗಿದೆ.
ಚಾಕು, ಬ್ಲೇಡ್‌ನಿಂದ ಭೀಕರ ಹಲ್ಲೆ!
ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇತ್ತಂಡಗಳ ನಡುವೆ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಮನೆ ಮಾಲೀಕರಾದ ಶೋಭಾ, ದೇವರಾಜ್ ಮತ್ತು ಅವರ ಮಕ್ಕಳು ಸೇರಿಕೊಂಡು ಬಾಡಿಗೆದಾರರಾದ ನರೇಶ್, ಸಚಿನ್ ಹಾಗೂ ರೇಖಾ ಅವರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.
ಗಲಾಟೆ ವೇಳೆ ಚಾಕು ಮತ್ತು ಬ್ಲೇಡ್‌ನಿಂದ ಬಾಡಿಗೆದಾರರ ಮೇಲೆ ಇರಿಯಲಾಗಿದೆ. ಹಲ್ಲೆಯಿಂದಾಗಿ ನರೇಶ್ ಮತ್ತು ಅವರ ಕುಟುಂಬಸ್ಥರ ಮುಖ, ತಲೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಅಷ್ಟೇ ಅಲ್ಲದೆ, ಗಲಾಟೆಯ ನಡುವೆ ಪ್ರಜ್ಞೆ ತಪ್ಪಿ ಬಿದ್ದ ಯುವತಿಯ ಮೇಲೆ ನೀರು ಸುರಿದು ವಿಕೃತಿ ಮೆರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪೊಲೀಸ್ ಠಾಣೆಗೆ ಮೆಟ್ಟಿಲೇರಿದ ಪ್ರಕರಣ
ರಕ್ತಸಿಕ್ತವಾಗಿ ಗಾಯಗೊಂಡಿದ್ದ ನರೇಶ್ ಮತ್ತು ಕುಟುಂಬಸ್ಥರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆಯ ನಂತರ ನರೇಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಜೀವನಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.