Skip to main content
ವಿಡಿಯೋ
crime

ಫ್ಲಾಟ್‌ಗೆ ಕರೆಸಿ ಯುವತಿಯ ಬರ್ಬರ ಹತ್ಯೆ! ಶವ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪೊಲೀಸ್ ಠಾಣೆಗೆ ಹೋಗಿ ಶರಣಾದ ಪಾತಕಿ

By Bhavana Gowda
ಫ್ಲಾಟ್‌ಗೆ ಕರೆಸಿ ಯುವತಿಯ ಬರ್ಬರ ಹತ್ಯೆ! ಶವ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪೊಲೀಸ್ ಠಾಣೆಗೆ ಹೋಗಿ ಶರಣಾದ ಪಾತಕಿ

ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ 'ಶ್ರದ್ಧಾ ವಾಕರ್' ಮಾದರಿಯ ಭೀಕರ ಕೊಲೆ ಪ್ರಕರಣವೊಂದು ಈಗ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

ವಿಶಾಖಪಟ್ಟಣಂ: ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ 'ಶ್ರದ್ಧಾ ವಾಕರ್' ಮಾದರಿಯ ಭೀಕರ ಕೊಲೆ ಪ್ರಕರಣವೊಂದು ಈಗ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಅನೈತಿಕ ಸಂಬಂಧ ಹಾಗೂ ಹಣದ ವಿಚಾರಕ್ಕಾಗಿ ನಡೆದ ಜಗಳದಲ್ಲಿ ಭಾರತೀಯ ನೌಕಾಪಡೆಯ (Indian Navy) ಉದ್ಯೋಗಿಯೊಬ್ಬ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಆಕೆಯ ದೇಹದ ಭಾಗಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು 29 ವರ್ಷದ ಮೌನಿಕಾ ಎಂದು ಗುರುತಿಸಲಾಗಿದೆ. ನೌಕಾಪಡೆಯಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ 35 ವರ್ಷದ ವಿವಾಹಿತ ಚಿಂತಾದ ರವೀಂದ್ರ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ.

ಫ್ಲಾಟ್‌ಗೆ ಕರೆಸಿ ಭೀಕರ ಕೊಲೆ!

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ರವೀಂದ್ರ ಮತ್ತು ಮೌನಿಕಾ ನಡುವೆ ಪರಿಚಯವಿತ್ತು. ಭಾನುವಾರ ರಾತ್ರಿ ರವೀಂದ್ರ ಯುವತಿಯನ್ನು ತನ್ನ ಫ್ಲಾಟ್‌ಗೆ ಆಹ್ವಾನಿಸಿದ್ದಾನೆ. ಅಲ್ಲಿ ಇಬ್ಬರ ನಡುವೆ ಜೋರಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.

ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ರವೀಂದ್ರ, ಮೌನಿಕಾಳನ್ನು ಹತ್ಯೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಯುವತಿಯ ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿದ್ದಾನೆ. ಕತ್ತರಿಸಿದ ದೇಹದ ತುಂಡುಗಳನ್ನು ಆತ ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದಾನೆ.

ಪೊಲೀಸ್ ಠಾಣೆಗೆ ನಡೆದೇ ಬಂದು ಶರಣಾದ ಆರೋಪಿ!

ಈ ಭೀಕರ ಕೃತ್ಯವನ್ನು ಎಸಗಿದ ನಂತರ ಆರೋಪಿ ರವೀಂದ್ರ ತಾನೇ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಆತ, "ಮೌನಿಕಾ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದಳು ಹಾಗೂ ಕಿರುಕುಳ ನೀಡುತ್ತಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಕೊಂದಿದ್ದೇನೆ" ಎಂದು ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಫ್ಲಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಫ್ರಿಡ್ಜ್‌ನಲ್ಲಿಟ್ಟಿದ್ದ ದೇಹದ ಭಾಗಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.