ಗಂಗಾವತಿ:ಅಪಘಾತದಲ್ಲಿ ಗಾಯಗೊಂಡ ಸ್ಥಳೀಯ ಯುವಕನಿಗೆ ವಿದೇಶಿ ಪ್ರವಾಸಿಗನೊಬ್ಬ ಮಾನವೀಯತೆ ಮೆರೆದು ಲಕ್ಷಾಂತರ ರೂಪಾಯಿ ಧನಸಹಾಯ ಮಾಡಿದ್ದರೂ, ಆತನ ವಿರುದ್ಧವೇ ಪ್ರಕರಣ ದಾಖಲಾಗಿರುವ ವಿಚಿತ್ರ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ.
ಏನಿದು ಘಟನೆ?
ಕಳೆದ ಫೆಬ್ರವರಿ 17 ರಂದು ಸಾಣಾಪುರ ಗ್ರಾಮದಲ್ಲಿ ವಿದೇಶಿ ಪ್ರವಾಸಿಗ ಹಾಗೂ ಸ್ಥಳೀಯ ಯುವಕನ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಸಾಣಾಪುರ ಗ್ರಾಮದ ಶಾಂತಕುಮಾರ್ ಎಂಬ ಯುವಕನ ಕಾಲು ಮುರಿದಿತ್ತು. ಇಸ್ರೇಲ್ ಮೂಲದ ಜೀವಿಶ್ ಎಂಬುವವರ ಬೈಕ್ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿತ್ತು.
ಮಾನವೀಯತೆ ಮೆರೆದ ಇಸ್ರೇಲ್ ಪ್ರವಾಸಿಗ!
ಅಪಘಾತ ನಡೆದ ತಕ್ಷಣ ಗಾಬರಿಯಾಗಿ ಓಡಿಹೋಗದ ಇಸ್ರೇಲ್ ಮೂಲದ ಜೀವಿಶ್, ಗಾಯಾಳು ಶಾಂತಕುಮಾರ್‌ಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದಾದ ಬಳಿಕ, ತನ್ನಿಂದಲೇ ಅಪಘಾತವಾಗಿದೆ ಎಂಬ ನೈತಿಕ ಹೊಣೆ ಹೊತ್ತ ಜೀವಿಶ್, ಶಾಂತಕುಮಾರ್ ಅವರ ಆಸ್ಪತ್ರೆ ಚಿಕಿತ್ಸೆಗಾಗಿ ಬರೋಬ್ಬರಿ ₹6 ಲಕ್ಷ ಹಣವನ್ನು ನೀಡಿದ್ದಾರೆ. ಊರಿನ ಪ್ರಮುಖರು ಹಾಗೂ ಮುಖಂಡರ ಸಮ್ಮುಖದಲ್ಲೇ ಈ ಹಣವನ್ನು ಹಸ್ತಾಂತರಿಸಲಾಗಿತ್ತು. ಗಾಯಾಳು ಶಾಂತಕುಮಾರ್ ಸದ್ಯ ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಣ ಪಡೆದೂ ಸುಳ್ಳು ದೂರು? ವಿಡಿಯೋ ವೈರಲ್!
ಟ್ವಿಸ್ಟ್ ಏನೆಂದರೆ, ವಿದೇಶಿ ಪ್ರವಾಸಿಗನಿಂದ ಚಿಕಿತ್ಸೆಗಾಗಿ 6 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿರುವ ಶಾಂತಕುಮಾರ್ ಕುಟುಂಬಸ್ಥರು, ಆತ ನಮಗೆ ಯಾವುದೇ ಹಣ ನೀಡಿಲ್ಲ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಆದರೆ, ಊರಿನ ಮುಖಂಡರ ಸಮ್ಮುಖದಲ್ಲಿ ವಿದೇಶಿ ಪ್ರವಾಸಿಗ ಜೀವಿಶ್ ಹಣ ನೀಡುತ್ತಿರುವ ದೃಶ್ಯಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಹಣ ಪಡೆದುಕೊಂಡು ಈಗ ಸುಳ್ಳು ದೂರು ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.