ದೇವನಹಳ್ಳಿ: ಶ್ರೀರಾಮನವಮಿ ಹಬ್ಬದ ಅಂಗವಾಗಿ ದೇವಸ್ಥಾನವೊಂದರಲ್ಲಿ ವಿತರಿಸಲಾದ ಅನ್ನಪ್ರಸಾದ ಸೇವಿಸಿ 200ಕ್ಕೂ ಹೆಚ್ಚು ಗ್ರಾಮಸ್ಥರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅನ್ನಪ್ರಸಾದ ಸೇವಿಸಿದವರಲ್ಲಿ ವಾಂತಿ, ಭೇದಿ!
ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅತ್ಯಂತ ಸಡಗರದಿಂದ ಶ್ರೀರಾಮ ಜಯಂತೋತ್ಸವವನ್ನು ಆಚರಿಸಲಾಗಿತ್ತು. ಈ ವೇಳೆ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಅನ್ನಪ್ರಸಾದ ವಿನಿಯೋಗ ಮಾಡಲಾಗಿತ್ತು. ಆದರೆ, ಪ್ರಸಾದ ಸೇವಿಸಿದ ಕೆಲವೇ ಗಂಟೆಗಳಲ್ಲಿ ಗ್ರಾಮಸ್ಥರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಒಂದೇ ಬಾರಿಗೆ ನೂರಾರು ಜನರಿಗೆ ಫುಡ್ ಪಾಯಿಸನ್ (ಆಹಾರ ವಿಷಾಹಾರ) ಆಗಿರುವುದು ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಆಸ್ಪತ್ರೆಗಳತ್ತ ದೌಡಾಯಿಸಿದ ಗ್ರಾಮಸ್ಥರು
ಅಸ್ವಸ್ಥರಾದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 200ಕ್ಕೂ ಹೆಚ್ಚು ಜನರು ಸುತ್ತಮುತ್ತಲಿನ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಬಹುತೇಕರು ತೀವ್ರ ಹೊಟ್ಟೆನೋವು ಮತ್ತು ಸುಸ್ತಿನಿಂದ ಅಸ್ತವ್ಯಸ್ತಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಧಾವಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವೈದ್ಯರ ತಂಡ ಪ್ರಾಥಮಿಕ ಚಿಕಿತ್ಸೆ ನೀಡಲು ತಾತ್ಕಾಲಿಕ ಶಿಬಿರ ಆರಂಭಿಸಿದೆ.
ಇನ್ನು ತೀವ್ರವಾಗಿ ಅಸ್ವಸ್ಥಗೊಂಡವರನ್ನು ಆ್ಯಂಬುಲೆನ್ಸ್ ಮೂಲಕ ತಕ್ಷಣವೇ ಪಟ್ಟಣದ ವಿವಿಧ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದೇ ಮೊದಲ ಬಾರಿಗೆ ಇಂತಹ ಘಟನೆ!
ಸ್ಥಳೀಯರ ಪ್ರಕಾರ, ಬೆಟ್ಟೇನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಶ್ರೀರಾಮನವಮಿ ಹಬ್ಬವನ್ನು ಸಡಗರದಿಂದ ಆಚರಿಸಿ, ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿತ್ತು. ಆದರೆ ಈ ಹಿಂದೆಂದೂ ಇಂತಹ ಘಟನೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಅನ್ನಪ್ರಸಾದ ಸೇವಿಸಿ ನೂರಾರು ಜನ ಆಸ್ಪತ್ರೆ ಸೇರಿರುವುದು ಗ್ರಾಮಸ್ಥರಲ್ಲಿ ಆತಂಕ ಮತ್ತು ದಿಕ್ಕುತೋಚದ ಸ್ಥಿತಿ ನಿರ್ಮಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಸಾದಕ್ಕೆ ಬಳಸಲಾದ ಆಹಾರ ಸಾಮಗ್ರಿ ಹಾಗೂ ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.