Skip to main content
ವಿಡಿಯೋ
politics

ಸಿದ್ದಗಂಗಾ ಮಠಕ್ಕೆ ಬಿ.ಎಸ್. ಯಡಿಯೂರಪ್ಪ ಭೇಟಿ: ಪೂಜ್ಯರ ಹೆಸರು ಹೇಳದೇ ನಾನು ಯಾವುದೇ ಕೆಲಸ ಮಾಡಲ್ಲ ಎಂದ ಮಾಜಿ ಸಿಎಂ!

By Bhavana Gowda
ಸಿದ್ದಗಂಗಾ ಮಠಕ್ಕೆ ಬಿ.ಎಸ್. ಯಡಿಯೂರಪ್ಪ ಭೇಟಿ: ಪೂಜ್ಯರ ಹೆಸರು ಹೇಳದೇ ನಾನು ಯಾವುದೇ ಕೆಲಸ ಮಾಡಲ್ಲ ಎಂದ ಮಾಜಿ ಸಿಎಂ!

ಸಿದ್ದಗಂಗಾ ಮಠಕ್ಕೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮೊದಲು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯ ಗದ್ದುಗೆಗೆ ಭೇಟಿ ನೀಡಿ ಭಕ್ತಿಪೂರ್ವಕ ನಮನ ಸಲ್ಲಿಸಿದರು.

ತುಮಕೂರು: ನಾಳೆ (ಏಪ್ರಿಲ್ 1) 'ನಡೆದಾಡುವ ದೇವರು' ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತ್ಯುತ್ಸವದ ಸಂಭ್ರಮ. ಈ ಮಹತ್ವದ ಸುಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಪಡೆದಿದ್ದಾರೆ.

ಗದ್ದುಗೆ ದರ್ಶನ ಪಡೆದ ಬಿಎಸ್‌ವೈ

ಸಿದ್ದಗಂಗಾ ಮಠಕ್ಕೆ ಆಗಮಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮೊದಲು ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯ ಗದ್ದುಗೆಗೆ ಭೇಟಿ ನೀಡಿ ಭಕ್ತಿಪೂರ್ವಕ ನಮನ ಸಲ್ಲಿಸಿದರು. ಆನಂತರ ಮಠದ ಆವರಣದಲ್ಲಿ ಸಿದ್ದಗಂಗಾ ಮಠದ ಈಗಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಪ್ರತಿನಿತ್ಯ ಶ್ರೀಗಳ ನೆನಪು ಮಾಡಿಕೊಳ್ಳುತ್ತೇನೆ!

ಮಠದ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು ಭಾವುಕರಾಗಿ ನುಡಿದರು. "ಪರಮಪೂಜ್ಯ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವದ ಶುಭ ಸಂದರ್ಭದಲ್ಲಿ ಅವರ ಪೀಠಕ್ಕೆ ಬಂದು ದರ್ಶನ ಪಡೆಯುವ ಸೌಭಾಗ್ಯ ನನಗ ಸಿಕ್ಕಿದೆ. ಪೂಜ್ಯರ ಆಶೀರ್ವಾದ ಸದಾ ನನ್ನ ಮೇಲಿದೆ. ನಾನು ಪ್ರತಿನಿತ್ಯ ಅವರ ನೆನಪು ಮಾಡಿಕೊಳ್ಳದೇ, ಅವರ ಹೆಸರು ಹೇಳದೇ ಬೇರೆ ಯಾವುದೇ ಕೆಲಸವನ್ನು ಆರಂಭಿಸುವುದೇ ಇಲ್ಲ. ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರುತ್ತದೆ," ಎಂದು ಭಕ್ತಿಭಾವ ಮೆರೆದರು.

ರಾಷ್ಟ್ರಪತಿಗಳ ಆಗಮನ ಮಠಕ್ಕೆ ಹೆಮ್ಮೆ

ಮುಂದುವರಿದು ಮಾತನಾಡಿದ ಅವರು, "ನಾಳೆಯ ಜಯಂತಿ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಭಾಗವಹಿಸುತ್ತಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಸಂಗತಿ. ಸ್ವತಃ ದೇಶದ ಪ್ರಥಮ ಪ್ರಜೆಯೇ ಇಲ್ಲಿಗೆ ಆಗಮಿಸುತ್ತಿರುವುದು ಶ್ರೀ ಮಠಕ್ಕೆ ಮತ್ತಷ್ಟು ಹೆಚ್ಚಿನ ಮೆರುಗನ್ನು ತಂದುಕೊಡಲಿದೆ," ಎಂದು ಹರ್ಷ ವ್ಯಕ್ತಪಡಿಸಿದರು.

ಉಪ ಚುನಾವಣೆ: ಎರಡೂ ಕಡೆ ನೂರಕ್ಕೆ ನೂರು ಗೆಲ್ತೀವಿ!

ಇದೇ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದ ಯಡಿಯೂರಪ್ಪ ಅವರು ಉಪ ಚುನಾವಣೆಯ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಈ ಎರಡೂ ಕ್ಷೇತ್ರಗಳಲ್ಲಿ ನೂರಕ್ಕೆ ನೂರರಷ್ಟು ನಾವು (ಬಿಜೆಪಿ) ಗೆದ್ದೇ ಗೆಲ್ಲುತ್ತೇವೆ," ಎಂದು ದೃಢವಾಗಿ ನುಡಿದರು.