ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಕಣ ಕಾವೇರಿದೆ. ನಗರದ ವಿದ್ಯಾಗಿರಿಯ ತೆಗ್ಗಿ ಲೇಔಟ್‌ನಲ್ಲಿ ಅಬ್ಬರದ ಮತಯಾಚನೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವೀರಣ್ಣ ಚರಂತಿಮಠ ದೊಡ್ಡ ಅಂತರದಿಂದ ಗೆಲ್ಲುವುದು ಖಚಿತ!
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಿದ ವಿಜಯೇಂದ್ರ ಅವರು ಭಾಷಣದುದ್ದಕ್ಕೂ ಚರಂತಿಮಠ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು. "ವೀರಣ್ಣ ಚರಂತಿಮಠ ಅವರು ಒಬ್ಬ ಸಜ್ಜನ ರಾಜಕಾರಣಿ. ಅವರ ಮೇಲೆ ಯಾವುದೇ ರೀತಿಯ ಕಳಂಕಗಳೂ ಇಲ್ಲ. ಈ ಚುನಾವಣೆಯಲ್ಲಿ ಅವರು ಭರ್ಜರಿ ಅಂತರದಿಂದ ಗೆದ್ದು ಬರುವುದು ನೂರಕ್ಕೆ ನೂರರಷ್ಟು ಖಚಿತ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರಿಟಿಷರಂತೆ ಒಡೆದಾಳುವ ನೀತಿ: ಸಿಎಂ ವಿರುದ್ಧ ಕಿಡಿ
ಉಪಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, "ಈ ಉಪಚುನಾವಣೆಯ ಸಮರದಲ್ಲಿ ಕೇವಲ ಮುಖ್ಯಮಂತ್ರಿಗಳಷ್ಟೇ ಅಲ್ಲ, ಬರೋಬ್ಬರಿ 15 ಜನ ಸಚಿವರನ್ನು ಕರೆತಂದು ಪ್ರಚಾರ ನಡೆಸುತ್ತಿದ್ದಾರೆ. ಆ ಜಾತಿ, ಈ ಜಾತಿ ಅಂತೇಳಿ ಎಲ್ಲ ಜಾತಿಯ ಸಚಿವರನ್ನೂ ಇಲ್ಲಿಗೆ ಕರೆತರಲಾಗಿದೆ. ಬ್ರಿಟಿಷರಂತೆ ಒಡೆದಾಳುವ ನೀತಿಯನ್ನು ಈ ದೇಶದಲ್ಲಿ ಯಾರಾದರೂ ಮುಖ್ಯಮಂತ್ರಿ ಅನುಸರಿಸುತ್ತಿದ್ದರೆ ಅದು ಸಿಎಂ ಸಿದ್ದರಾಮಯ್ಯ ಮಾತ್ರ," ಎಂದು ತೀವ್ರವಾಗಿ ಕಿಡಿಕಾರಿದರು.
ಗ್ಯಾರಂಟಿ ಹೆಸರಲ್ಲಿ ಬೆದರಿಕೆ ಹಾಕುತ್ತಿದೆ ಕಾಂಗ್ರೆಸ್!
ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. "ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿಲ್ಲ ಎಂದರೆ ನಿಮ್ಮ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಅಂತ ಹೇಳಿ ಜನಸಾಮಾನ್ಯರಿಗೆ ಬೆದರಿಕೆ ಹಾಕಲಾಗುತ್ತಿದೆ," ಎಂದು ಆಕ್ರೋಶ ಹೊರಹಾಕಿದರು. ಬಾಗಲಕೋಟೆಯ ಮತದಾರರು ಇಂತಹ ಬೆದರಿಕೆಗಳಿಗೆ ಮತ್ತು ಜಾತಿಯ ರಾಜಕಾರಣಕ್ಕೆ ಬಲಿಯಾಗದೆ ಅಭಿವೃದ್ಧಿಯ ಪರವಾಗಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಜಯೇಂದ್ರ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.