ಕೊಪ್ಪಳ: ಬೇಸಿಗೆಯ ಬಿಸಿಲಿನ ತಾಪವನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ (ಏಪ್ರಿಲ್ 1) ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾಯಿಸಲಾಗಿದೆ. ಆದರೆ, ಹೊಸ ನಿಯಮ ಜಾರಿಗೆ ಬಂದ ಮೊದಲ ದಿನವೇ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗೈರುಹಾಜರಿ ಎದ್ದು ಕಾಣುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೆಚ್ಚುತ್ತಿರುವ ಬಿಸಿಲಿನ ಹಿನ್ನೆಲೆಯಲ್ಲಿ ಇಂದಿನಿಂದ ಮೇ 31 ರವರೆಗೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಈ ಹಿಂದೆಯೇ ಆದೇಶಿಸಲಾಗಿತ್ತು. ಆದರೆ ಈ ಸಮಯ ಬದಲಾವಣೆಗೆ ಸಿಬ್ಬಂದಿಗಳು ಮಾತ್ರ ಇನ್ನೂ ಹೊಂದಿಕೊಂಡಂತೆ ಕಾಣುತ್ತಿಲ್ಲ.
ಡಿಸಿ ಮಾತ್ರ ಹಾಜರು; ಓಪನ್ ಆಗದ ಕಚೇರಿಗಳು
ಬೆಳಿಗ್ಗೆ 8 ಗಂಟೆಗೇ ಕಚೇರಿಗಳು ಆರಂಭವಾಗಬೇಕಿದ್ದರೂ, ಜಿಲ್ಲಾಡಳಿತ ಭವನದ ಬಹುತೇಕ ಕಚೇರಿಗಳು ತೆರೆದೇ ಇರಲಿಲ್ಲ. ಸ್ವತಃ ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಇಟ್ನಾಳ್ ಅವರು ಮಾತ್ರ ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿದ್ದರು. ಆದರೆ ಕಚೇರಿಯ ಪ್ರಮುಖ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಮಾತ್ರ ಎಂದಿನಂತೆ ತಡವಾಗಿ ಬರುವ ಚಾಳಿ ಮುಂದುವರಿಸಿದ್ದಾರೆ.
ಸಾರ್ವಜನಿಕರ ಆರೋಪಗಳೇನು?
* ಕೆಲಸಗಳು ಆಮೆಯ ವೇಗ: "ಕಳೆದ ಎರಡು ತಿಂಗಳಿಂದ ಕಚೇರಿಗಳಲ್ಲಿ ಯಾವುದೇ ಸರಿಯಾದ ಕೆಲಸಗಳೇ ಆಗುತ್ತಿಲ್ಲ" ಎಂದು ದೂರದ ಊರುಗಳಿಂದ ಬಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
* ಅಲೆದಾಟ ತಪ್ಪಿಲ್ಲ: ಬಿಸಿಲು ಹೆಚ್ಚಾಗುವ ಮುನ್ನವೇ ಕೆಲಸ ಮುಗಿಸಿಕೊಂಡು ಹೋಗೋಣ ಎಂದು ಬೆಳ್ಳಂಬೆಳಿಗ್ಗೆ ಕಚೇರಿಗೆ ಬಂದರೆ, ಇಲ್ಲಿ ಕಚೇರಿಗಳೇ ಓಪನ್ ಆಗಿಲ್ಲ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾಧಿಕಾರಿಗಳ ಖಡಕ್ ಸೂಚನೆ: ಮೊದಲ ದಿನವೇ ಅಧಿಕಾರಿಗಳ ಈ ವಿಳಂಬ ಧೋರಣೆಯನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.