Skip to main content
ವಿಡಿಯೋ
local

ಗಗನಕ್ಕೇರಿದ ಇಂಧನ ದರ: ಪ್ರೀಮಿಯಂ ಪೆಟ್ರೋಲ್, ಕಮರ್ಷಿಯಲ್ ಸಿಲಿಂಡರ್ ಹಾಗೂ ವಿಮಾನದ ಇಂಧನ ಬೆಲೆಯಲ್ಲಿ ಭಾರಿ ಏರಿಕೆ!

By Bhavana Gowda
ಗಗನಕ್ಕೇರಿದ ಇಂಧನ ದರ: ಪ್ರೀಮಿಯಂ ಪೆಟ್ರೋಲ್, ಕಮರ್ಷಿಯಲ್ ಸಿಲಿಂಡರ್ ಹಾಗೂ ವಿಮಾನದ ಇಂಧನ ಬೆಲೆಯಲ್ಲಿ ಭಾರಿ ಏರಿಕೆ!

ಹೋಟೆಲ್ ಹಾಗೂ ಉದ್ಯಮಗಳಲ್ಲಿ ಬಳಸುವ ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್ ದರ ಮತ್ತಷ್ಟು ದುಬಾರಿಯಾಗಿದೆ. ಇಂದು ಒಂದೇ ದಿನ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 208 ರೂಪಾಯಿ ಹೆಚ್ಚಳ ಮಾಡಲಾಗಿದೆ.

ನವದೆಹಲಿ: ಹಣದುಬ್ಬರ ಮತ್ತು ಜಾಗತಿಕ ವಿದ್ಯಮಾನಗಳ ನಡುವೆ ದೇಶದ ಜನತೆಗೆ ತೈಲ ಕಂಪನಿಗಳು ಮತ್ತೊಂದು ದೊಡ್ಡ ಶಾಕ್ ನೀಡಿವೆ. ಪ್ರೀಮಿಯಂ ಪೆಟ್ರೋಲ್, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಹಾಗೂ ವಿಮಾನದ ಇಂಧನ (ATF) ದರಗಳಲ್ಲಿ ಭಾರಿ ಏರಿಕೆ ಮಾಡಲಾಗಿದ್ದು, ಜನಸಾಮಾನ್ಯರು ಹಾಗೂ ಉದ್ಯಮಿಗಳ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.

ವಿವಿಧ ಇಂಧನಗಳ ಇಂದಿನ ಪರಿಷ್ಕೃತ ದರಗಳ ಸಂಪೂರ್ಣ ವಿವರ ಇಲ್ಲಿದೆ:

ಲೀಟರ್ ಪ್ರೀಮಿಯಂ ಪೆಟ್ರೋಲ್‌ಗೆ ಈಗ ₹160!

ಸಾಮಾನ್ಯ ಪೆಟ್ರೋಲ್‌ಗಿಂತ ದುಬಾರಿಯಾಗಿರುವ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಬರೋಬ್ಬರಿ 11 ರೂಪಾಯಿ ಏರಿಕೆ ಮಾಡಲಾಗಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 149 ರೂಪಾಯಿ ಇದ್ದ ಪ್ರೀಮಿಯಂ ಪೆಟ್ರೋಲ್ ಬೆಲೆ ಈಗ 160 ರೂಪಾಯಿಗೆ ಬಂದು ತಲುಪಿದೆ. ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ₹208 ಹೆಚ್ಚಳ!

ಹೋಟೆಲ್ ಹಾಗೂ ಉದ್ಯಮಗಳಲ್ಲಿ ಬಳಸುವ ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್ ದರ ಮತ್ತಷ್ಟು ದುಬಾರಿಯಾಗಿದೆ. ಇಂದು ಒಂದೇ ದಿನ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 208 ರೂಪಾಯಿ ಹೆಚ್ಚಳ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಯುದ್ಧ ಆರಂಭವಾದ ನಂತರ ಈವರೆಗೆ ಕಮರ್ಷಿಯಲ್ ಸಿಲಿಂಡರ್ ದರ ಬರೋಬ್ಬರಿ 300 ರೂಪಾಯಿಗಳಷ್ಟು ಏರಿಕೆಯಾದಂತಾಗಿದೆ. ಇದು ಹೋಟೆಲ್ ಉದ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.

ವಿಮಾನ ಇಂಧನ ದರವೂ ದುಬಾರಿ: ದೇಶೀಯ ವಿಮಾನಗಳಿಗೆ ಕೊಂಚ ನಿರಾಳ

ವಿಮಾನಗಳಿಗೆ ಬಳಸುವ ಏವಿಯೇಷನ್ ಟರ್ಬೈನ್ ಇಂಧನ (ATF) ದರದಲ್ಲಿಯೂ ಕೂಡ ದಾಖಲೆಯ ಮಟ್ಟದ ಏರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಇಂಧನದ ದರ ಪ್ರತಿ ಕೆ.ಜಿ.ಗೆ 2.07 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ನಾಗರಿಕ ವಿಮಾನಯಾನ ಇಲಾಖೆಯೊಂದಿಗೆ ಚರ್ಚಿಸಿ ಹಂತ ಹಂತವಾಗಿ ಈ ದರ ಹೆಚ್ಚಳ ಮಾಡಲಾಗುತ್ತಿದೆ. ಆದಾಗ್ಯೂ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಹೊರೆಯಾಗದಂತೆ ದೇಶೀಯ ವಿಮಾನಗಳ ಇಂಧನ ದರವನ್ನು ಕೇವಲ ಶೇ. 25 ರಷ್ಟು ಮಾತ್ರ ಹೆಚ್ಚಿಸಲಾಗಿದ್ದು, ಪ್ರತಿ ಕೆ.ಜಿ.ಗೆ 1.04 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.

ವಿವಿಧ ನಗರಗಳಲ್ಲಿ ದೇಶೀಯ ವಿಮಾನ ಇಂಧನ ದರ (ಪ್ರತಿ ಕೆ.ಜಿ.ಗೆ):

ಕೋಲ್ಕತ್ತಾ ಮತ್ತು ಚೆನ್ನೈ: ₹1.09 ಲಕ್ಷ

ಮುಂಬೈ: ₹98 ಸಾವಿರ

ನಿರಂತರವಾಗಿ ಹೆಚ್ಚುತ್ತಿರುವ ಇಂಧನ ದರಗಳು ಮುಂದಿನ ದಿನಗಳಲ್ಲಿ ಸಾರಿಗೆ ವೆಚ್ಚ ಹಾಗೂ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡುವ ಆತಂಕ ಎದುರಾಗಿದೆ.