Skip to main content
ವಿಡಿಯೋ
crime

ಬೆಂಗಳೂರಿನಲ್ಲಿ ಕರುಳು ಹಿಂಡುವ ಘಟನೆ: ಬಕೆಟ್ ನೀರಲ್ಲಿ ಮುಳುಗಿ ಮಗು ಸಾವು; ಆಘಾತ ತಾಳಲಾರದೆ ಸಾಫ್ಟ್‌ವೇರ್ ಉದ್ಯೋಗಿ ತಾಯಿಯೂ ಆತ್ಮಹತ್ಯೆ!

By Bhavana Gowda
ಬೆಂಗಳೂರಿನಲ್ಲಿ ಕರುಳು ಹಿಂಡುವ ಘಟನೆ: ಬಕೆಟ್ ನೀರಲ್ಲಿ ಮುಳುಗಿ ಮಗು ಸಾವು; ಆಘಾತ ತಾಳಲಾರದೆ ಸಾಫ್ಟ್‌ವೇರ್ ಉದ್ಯೋಗಿ ತಾಯಿಯೂ ಆತ್ಮಹತ್ಯೆ!

ಪ್ರತಿಭಾ ಹಾಗೂ ಮಹಂತೇಶ್ ದಂಪತಿ ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಕಳೆದ ೪ ವರ್ಷಗಳಿಂದ ಭೈರವೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಬೆಂಗಳೂರು: ತಾಯಿ ಬಟ್ಟೆ ತರಲು ಟೆರೇಸ್‌ಗೆ ಹೋಗಿದ್ದಾಗ ಆಟವಾಡುತ್ತಿದ್ದ ೧೧ ತಿಂಗಳ ಹಸುಗೂಸು ಬಚ್ಚಲು ಮನೆಯ ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮಗುವಿನ ಸಾವಿನ ಆಘಾತ ತಾಳಲಾರದೆ ಹಾಗೂ ಅಪರಾಧ ಪ್ರಜ್ಞೆಯಿಂದ ನೊಂದ ಹೆತ್ತ ತಾಯಿಯೂ ಕೂಡ ನೇಣಿಗೆ ಶರಣಾಗಿರುವ ಅತ್ಯಂತ ಹೃದಯವಿದ್ರಾವಕ ಘಟನೆ ರಾಜಧಾನಿಯ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಂದ್ರಾಲೇಔಟ್‌ನ ಭೈರವೇಶ್ವರ ನಗರದಲ್ಲಿ ವಾಸವಿದ್ದ ಸಾಫ್ಟ್‌ವೇರ್ ಉದ್ಯೋಗಿ ಪ್ರತಿಭಾ (೨೯) ಹಾಗೂ ಆಕೆಯ ೧೧ ತಿಂಗಳ ಮುದ್ದಾದ ಗಂಡು ಮಗು ಅಗಸ್ತ್ಯ ಮೃತ ದುರ್ದೈವಿಗಳು.

ನಡೆದಿದ್ದೇನು?

ಪ್ರತಿಭಾ ಹಾಗೂ ಮಹಂತೇಶ್ ದಂಪತಿ ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಕಳೆದ ೪ ವರ್ಷಗಳಿಂದ ಭೈರವೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತಿ ಮಹಂತೇಶ್ ಪೀಣ್ಯದ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಪ್ರತಿಭಾ ಸಿಲ್ಕ್‌ಬೋರ್ಡ್ ಬಳಿಯ ಖಾಸಗಿ ಕಂಪನಿಯೊಂದರಲ್ಲಿ ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದರು.

ನಿನ್ನೆ ಎಂದಿನಂತೆ ಪತಿ ಬೆಳಗ್ಗೆ ೯ ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಪ್ರತಿಭಾ ಹಾಗೂ ಮಗು ಅಗಸ್ತ್ಯ ಇಬ್ಬರೇ ಇದ್ದರು. ಈ ವೇಳೆ ಮಗು ಆಟವಾಡುತ್ತಿತ್ತು. ಪ್ರತಿಭಾ ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಮನೆಯ ಟೆರೇಸ್‌ಗೆ ಹೋಗಿದ್ದರು. ಈ ಅಲ್ಪ ಸಮಯದಲ್ಲಿ ಮಗು ತೆವಳಿಕೊಂಡು ಬಚ್ಚಲು ಮನೆಗೆ ಹೋಗಿ, ಅಲ್ಲಿ ನೀರಿದ್ದ ಬಕೆಟ್‌ನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ. ಟೆರೇಸ್‌ನಿಂದ ವಾಪಸ್ ಬಂದ ತಾಯಿಗೆ ಮಗು ಬಕೆಟ್‌ನಲ್ಲಿ ಮುಳುಗಿರುವುದು ಕಂಡುಬಂದಿದೆ. ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಡೆತ್‌ನೋಟ್‌ನಲ್ಲಿ ತಾಯಿ ಬಿಚ್ಚಿಟ್ಟ ಸತ್ಯ!

ಮಗುವಿನ ಸಾವು ಕಂಡು ತೀವ್ರ ಆಘಾತಕ್ಕೊಳಗಾದ ಪ್ರತಿಭಾ, ಕಂದನ ಸಾವಿಗೆ ತಾನೇ ಕಾರಣ ಎಂಬ ತೀವ್ರ ಅಪರಾಧ ಪ್ರಜ್ಞೆಗೆ ಒಳಗಾಗಿದ್ದಾರೆ. ಹೀಗಾಗಿ ತಾವೂ ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಇಂಗ್ಲಿಷ್‌ನಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ:

"ನಾನು ಬಟ್ಟೆ ತರಲು ಟೆರೇಸ್‌ಗೆ ಹೋಗಿದ್ದೆ. ಈ ವೇಳೆ ಮಗು ಬಚ್ಚಲು ಮನೆಗೆ ಹೋಗಿ ಬಕೆಟ್ ನೀರಿನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನು ಉಳಿಸಿಕೊಳ್ಳಲು ನನ್ನಿಂದ ಆಗಲಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿ..." ಎಂದು ಬರೆದಿದ್ದಾರೆ.

ಇದಾದ ಬಳಿಕ ಪ್ರತಿಭಾ ಮೊದಲು ೧೫ 'ಡೋಲೋ' ಮಾತ್ರೆಗಳನ್ನು ನುಂಗಿದ್ದಾರೆ. ನಂತರ ಚಾಕುವಿನಿಂದ ಎಡಗೈ ಮುಂಗೈ ಕೊಯ್ದುಕೊಂಡು ರಕ್ತ ಹರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಅತಿಯಾದ ರಕ್ತಸ್ರಾವ ಆಗದ ಕಾರಣ ಕೊನೆಗೆ ರೂಮಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಸಾಯುವ ಮುನ್ನ ಮಗುವಿನ ಮೃತದೇಹವನ್ನು ತಂದು ಮಂಚದ ಮೇಲೆ ಮಲಗುವ ರೀತಿಯಲ್ಲಿ ಮಲಗಿಸಿದ್ದರು.

ರಾತ್ರಿ ಮನೆಗೆ ಬಂದ ಪತಿಗೆ ಕಾಯುತ್ತಿತ್ತು ಘೋರ ಆಘಾತ!

ಸಂಜೆ ಸುಮಾರು ೬:೩೦ಕ್ಕೆ ಕೆಲಸ ಮುಗಿಸಿ ಪತಿ ಮಹಂತೇಶ್ ಮನೆಗೆ ಬಂದಾಗ ಬಾಗಿಲು ಲಾಕ್ ಆಗಿತ್ತು. ಎಷ್ಟೇ ತಟ್ಟಿದರೂ ಹೆಂಡತಿ ಬಾಗಿಲು ತೆರೆಯಲಿಲ್ಲ, ಫೋನ್ ಮಾಡಿದರೂ ಸ್ವೀಕರಿಸಲಿಲ್ಲ. ಅನುಮಾನಗೊಂಡು ಕಿಟಕಿಯ ಒಳಗಡೆ ಇದ್ದ ಕೀಲಿ ಕೈ ಸಹಾಯದಿಂದ ಬಾಗಿಲು ತೆರೆದು ರೂಮಿಗೆ ಹೋಗಿ ನೋಡಿದಾಗ ಹೆಂಡತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಚದ ಮೇಲೆ ಮಗು ಮಲಗಿದ ಸ್ಥಿತಿಯಲ್ಲಿ ಶವವಾಗಿ ಬಿದ್ದಿತ್ತು. ಪಕ್ಕದಲ್ಲೇ ರಕ್ತದ ಕಲೆಗಳು, ಖಾಲಿಯಾದ ಮಾತ್ರೆಗಳ ಶೀಟ್ ಹಾಗೂ ಡೆತ್‌ನೋಟ್ ಪತ್ತೆಯಾಗಿದೆ.

ಪತಿಯ ದೂರಿನ ಮೇರೆಗೆ ಪ್ರಕರಣ ದಾಖಲು

ಪತ್ನಿ ಮತ್ತು ಮಗುವಿನ ಅಕಾಲಿಕ ಹಾಗೂ ನಿಗೂಢ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ಮಹಂತೇಶ್ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.