ದಾವಣಗೆರೆ: "ರಾಜ್ಯದ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ (ICU). ಸುಳ್ಳಿನ ವೆಂಟಿಲೇಟರ್ ತೆಗೆದರೆ ಈ ಸರ್ಕಾರ ತಕ್ಷಣವೇ ಸತ್ತು ಹೋಗುತ್ತದೆ!" ಹೀಗೆಂದು ಮಾಜಿ ಸಚಿವ ಬಿ. ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಚಿವರ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್‌ನವರು ಹೆಗ್ಗಣಗಳಿದ್ದಂತೆ!
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಅತ್ಯಂತ ಆಕ್ರೋಶಭರಿತವಾಗಿ ಮಾತನಾಡಿದ ಶ್ರೀರಾಮುಲು, ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದರು:
ಲೂಟಿ ಹೊಡೆದ ಖಜಾನೆ: ಇಂದು ಕಾಂಗ್ರೆಸ್ ಮಂತ್ರಿಗಳು ಖಜಾನೆಯನ್ನು ಸಂಪೂರ್ಣವಾಗಿ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ೫ ರಿಂದ ೧೦ ತಲೆಮಾರಿಗಾಗುವಷ್ಟು ಭ್ರಷ್ಟಾಚಾರವನ್ನು ಈ ಸರ್ಕಾರದಲ್ಲಿ ಮಾಡಲಾಗುತ್ತಿದೆ.
ಹೆಗ್ಗಣಗಳಿಗೆ ಹೋಲಿಕೆ: "ಕಾಂಗ್ರೆಸ್ ಪಕ್ಷದವರು ಹೆಗ್ಗಣಗಳಿದ್ದಂತೆ. ಹೆಗ್ಗಣಗಳು ಹೇಗೆ ಎಲ್ಲವನ್ನೂ ಕಡಿದು ಕೆದರುತ್ತವೆಯೋ, ಹಾಗೆಯೇ ರಾಜ್ಯವನ್ನು ಕಡಿದು ಕದರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಮಂತ್ರಿಮಂಡಲದಲ್ಲಿ ಇಂತಹ ಹೆಗ್ಗಣಗಳನ್ನೇ ಸಾಕಿಕೊಂಡಿದ್ದಾರೆ" ಎಂದು ಕಿಡಿಕಾರಿದರು.
ವಾಲ್ಮೀಕಿ ಹಗರಣ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣವನ್ನು ಸ್ವತಃ ಸಿಎಂ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಈವರೆಗೆ ಲೂಟಿಯಾದ ಹಣ ವಾಪಸ್ ಬಂದಿಲ್ಲ ಹಾಗೂ ತಪ್ಪಿತಸ್ಥ ನಿಗಮದ ಅಧ್ಯಕ್ಷರ ಮೇಲೆ ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಗೋಮಾತೆ ಇದ್ದಂತೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಬಿಜೆಪಿಯವರನ್ನು 'ಕಳ್ಳ ಎತ್ತು'ಗಳಿಗೆ ಹೋಲಿಸಿದ್ದಕ್ಕೆ ತಿರುಗೇಟು ನೀಡಿದ ಶ್ರೀರಾಮುಲು, "ಬಿಜೆಪಿಯವರು ಕಳ್ಳ ಎತ್ತುಗಳಲ್ಲ, ನಾವು ಗೋಮಾತೆ ಇದ್ದಂತೆ. ಆದರೆ ಸಿದ್ದರಾಮಯ್ಯನವರ ಸರ್ಕಾರ ಹುಟ್ಟಿದ್ದೇ ಸುಳ್ಳಿನಿಂದ" ಎಂದರು.
ಸೋಲಿನ ಭೀತಿ: ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸೋಲುವ ಭೀತಿ ಎದುರಾಗಿದೆ. ಹಾಗಾಗಿಯೇ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ 'ಗ್ಯಾರಂಟಿ ಯೋಜನೆಗಳು' ಬಂದ್ ಆಗುತ್ತವೆ ಎಂದು ಸಿದ್ದರಾಮಯ್ಯ ಕಂಪನಿ ಸುಳ್ಳು ಪ್ರಚಾರ ಮಾಡುತ್ತಿದೆ.
ಡಿಕೆಶಿ ಮತ್ತು ಬಿಜೆಪಿ ಭಯ: ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ಎಷ್ಟರಮಟ್ಟಿಗೆ ಭಯವಿದೆಯೋ, ಅಷ್ಟೇ ಭಯ ಬಿಜೆಪಿಯ ಮೇಲೂ ಇದೆ. ಈ ಹಿಂದೆ ೨೦೧೮ ರಲ್ಲಿ ಡಾ. ಜಿ. ಪರಮೇಶ್ವರ್ ಅವರು ಸಿಎಂ ಆಗುತ್ತಾರೆಂಬ ಕಾರಣಕ್ಕಾಗಿಯೇ ಅವರನ್ನು ಸೋಲಿಸಲಾಯಿತು. ಸಿಎಂ ಸಿದ್ದರಾಮಯ್ಯನವರೇ ಅಂದು ದಲಿತ ಮುಖಂಡರನ್ನು ಸೋಲಿಸಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಹುಟ್ಟುವ ಮಗುವಿನ ತಲೆಯ ಮೇಲೂ ಸಾಲ!
ಕಾಂಗ್ರೆಸ್ ನಾಯಕರು ಈ ಹಿಂದೆ ಮಾಡಿದ್ದ ಸಾಲದ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಅವರು, "ಕಾಂಗ್ರೆಸ್ ಸರ್ಕಾರ ರಾಜ್ಯದ ಮೇಲೆ ಬರೋಬ್ಬರಿ ೮ ಲಕ್ಷ ಕೋಟಿ ರೂಪಾಯಿಗಳ ಸಾಲದ ಹೊರೆ ಹೊರಿಸಿದೆ. ಇಂದು ಹುಟ್ಟುವ ಮಕ್ಕಳ ತಲೆಯ ಮೇಲೂ ಸಾಲ ತಂದಿಟ್ಟಿದ್ದಾರೆ. ಇಂತಹ ದರಿದ್ರ ಸರ್ಕಾರವನ್ನು ರಾಜ್ಯದ ಜನತೆ ಹಿಂದೆಂದೂ ಕಂಡಿರಲಿಲ್ಲ" ಎಂದು ಜರಿದರು.
ಅಲ್ಲದೆ, "ಅಭಿವೃದ್ಧಿ ಮತ್ತು ದೇಶದ ಹಿತದೃಷ್ಟಿಯಿಂದ ಪ್ರಧಾನಿಯವರು ಸಭೆ ಕರೆದರೆ ಸಿಎಂ ಸಿದ್ದರಾಮಯ್ಯ ಚಕ್ಕರ್ ಹೊಡೆಯುತ್ತಾರೆ. ಹೀಗಿರುವಾಗ ಇವರಿಗೆ ಪ್ರಧಾನಿಗಳ ಬಗ್ಗೆ ಮಾತನಾಡುವ ಯಾವ ಹಕ್ಕಿದೆ?" ಎಂದು ಪ್ರಶ್ನಿಸಿದ ಅವರು, ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.