ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ-ಬಿಟಿ ಉದ್ಯಮಕ್ಕಷ್ಟೇ ಅಲ್ಲ, ಈಗ ಮದುವೆಯಾದವರ 'ರಹಸ್ಯ ಸಂಬಂಧ'ಗಳಿಗೂ ಪ್ರಮುಖ ವೇದಿಕೆಯಾಗುತ್ತಿದೆ! ಹೌದು, ವಿವಾಹಿತರಿಗಾಗಿಯೇ ಇರುವ ವಿಶೇಷ ಡೇಟಿಂಗ್ ಆ್ಯಪ್ 'ಗ್ಲೀಡೆನ್' (Gleeden) ಬಳಕೆಯಲ್ಲಿ ಬೆಂಗಳೂರು ಈಗ ಇಡೀ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ಮದುವೆಯಾದವರು ತಮ್ಮ ವೈವಾಹಿಕ ಜೀವನದ ಹೊರತಾಗಿ ರಹಸ್ಯ ಸ್ನೇಹ ಅಥವಾ ಅಕ್ರಮ ಸಂಬಂಧ ಬೆಳೆಸಲು ಈ ಆ್ಯಪ್ ಬಳಸುತ್ತಿದ್ದು, ದೇಶದಲ್ಲಿ ಇದರ ಹಾವಳಿ ಹೆಚ್ಚಾಗುತ್ತಿದೆ.
ಭಾರತದಲ್ಲಿ ೪೦ ಲಕ್ಷ ಮಂದಿ ಬಳಕೆ!
ವಿಶೇಷವಾಗಿ ಮದುವೆಯಾದವರಿಗಾಗಿಯೇ ರೂಪಿಸಲಾಗಿರುವ ಈ ವಿಶಿಷ್ಟ ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಈ ಆ್ಯಪ್ ಬಳಸುವವರ ಸಂಖ್ಯೆ ಬರೋಬ್ಬರಿ ೪ ಮಿಲಿಯನ್ (೪೦ ಲಕ್ಷ) ದಾಟಿದೆ. ಇವರಲ್ಲಿ ಶೇ. ೬೫ ರಷ್ಟು ಪುರುಷರಿದ್ದರೆ, ಶೇ. ೩೫ ರಷ್ಟು ಮಹಿಳೆಯರಿದ್ದಾರೆ. ಕಳೆದ ಕೇವಲ ಎರಡು ವರ್ಷಗಳಲ್ಲಿ ಮಹಿಳಾ ಬಳಕೆದಾರರ ಸಂಖ್ಯೆಯಲ್ಲಿ ಬರೋಬ್ಬರಿ ಶೇ. ೧೪೮ ರಷ್ಟು ಭಾರೀ ಏರಿಕೆಯಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಬೆಂಗಳೂರು ಫಸ್ಟ್.. ಹೈದರಾಬಾದ್ ನೆಕ್ಸ್ಟ್!
ಭಾರತದ ಡೇಟಿಂಗ್ ನಕ್ಷೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಗ್ಲೀಡೆನ್ ಬಳಕೆದಾರರ ಒಟ್ಟು ಶೇಕಡಾವಾರು ಪ್ರಮಾಣವನ್ನು ಗಮನಿಸಿದರೆ ಮೆಟ್ರೋ ನಗರಗಳ ಪಾಲು ಹೀಗಿದೆ:
ನಗರ | ಬಳಕೆದಾರರ ಪ್ರಮಾಣ
ಬೆಂಗಳೂರು | ೧೮%
ಹೈದರಾಬಾದ್ | ೧೭%
ದೆಹಲಿ | ೧೧%
ಮುಂಬೈ | ೯%
ಪುಣೆ | ೭%
ಕೇವಲ ಮೆಟ್ರೋ ನಗರಗಳಷ್ಟೇ ಅಲ್ಲದೆ ಲಕ್ನೋ, ಚಂಡೀಗಢ, ಸೂರತ್, ಕೊಯಮತ್ತೂರು, ಭುವನೇಶ್ವರ, ಪಾಟ್ನಾ, ಗುವಾಹಟಿ ಮತ್ತು ರಾಯ್‌ಪುರದಂತಹ ಎರಡನೇ ಹಂತದ ನಗರಗಳಲ್ಲೂ ಈ ಆ್ಯಪ್ ಬಳಕೆ ಜೋರಾಗಿದೆ.
ಗುಟ್ಟಾಗಿ ಚಾಟ್ ಮಾಡುವ ಸಮಯ ಯಾವುದು ಗೊತ್ತಾ?
ವರದಿಗಳ ಪ್ರಕಾರ, ಈ ಆ್ಯಪ್‌ನಲ್ಲಿ ಬಳಕೆದಾರರು ದಿನಕ್ಕೆ ಸರಾಸರಿ ಒಂದೂವರೆ ಗಂಟೆಗಳ ಕಾಲ ಆನ್‌ಲೈನ್‌ನಲ್ಲಿದ್ದು ಚಾಟಿಂಗ್ ಮಾಡುತ್ತಾರೆ. ಇವರು ಲಾಗಿನ್ ಆಗುವ ಸಮಯಗಳು ಮಾತ್ರ ಅತ್ಯಂತ ವಿಚಿತ್ರವಾಗಿವೆ:
* ಮಧ್ಯಾಹ್ನ ೩ ಗಂಟೆ: ಬಹುಶಃ ಕಚೇರಿ ಬಿಡುವಿನ ವೇಳೆ ಅಥವಾ ಮನೆಯಲ್ಲಿ ಏಕಾಂಗಿಯಾಗಿರುವಾಗ.
* ರಾತ್ರಿ ೧೦ ಗಂಟೆ ನಂತರ: ಮನೆಯವರೆಲ್ಲ ನಿದ್ರಿಸಿದ ಬಳಿಕ.
* ಮಧ್ಯರಾತ್ರಿ: ತಡರಾತ್ರಿಯಲ್ಲಿ ಗುಟ್ಟಾಗಿ ಚಾಟ್ ಮಾಡಲು ಈ ಸಮಯವನ್ನು ಅತಿ ಹೆಚ್ಚು ಬಳಸುತ್ತಾರೆ.
ಮದುವೆಯ ಬಂಧನದಲ್ಲಿದ್ದರೂ ಹೊಸ ಸಂಬಂಧಗಳ ಹುಡುಕಾಟದಲ್ಲಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಭಾರತೀಯ ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆಯಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.