ಕಲಬುರಗಿ: ವಾಣಿಜ್ಯ ನಗರಿ ಕಲಬುರಗಿಯಲ್ಲಿ ತಡರಾತ್ರಿ ಭೀಕರ ರಕ್ತಪಾತ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳ ಗ್ಯಾಂಗ್ ಒಂದು ಮಾಜಿ ಸಚಿವರ ಸೋದರ ಅಳಿಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಪಿ & ಟಿ ಕಾಲೋನಿ ಬಳಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ. ಹತ್ಯೆಯಾದ ದುರ್ದೈವಿಯನ್ನು ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಸೋದರ ಅಳಿಯ ಅನೀಲ ರಾಠೋಡ್ (೪೫) ಎಂದು ಗುರುತಿಸಲಾಗಿದೆ.
ಕಚೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!
ಮೃತ ಅನೀಲ ರಾಠೋಡ್ ಅವರು ಹಣಕಾಸು ವ್ಯವಹಾರ (ಫೈನಾನ್ಸ್) ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದರು. ಎಂದಿನಂತೆ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಅವರು ಕೆಲಸ ಮಾಡಿಕೊಂಡಿದ್ದರು. ತಡರಾತ್ರಿ ವೇಳೆ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ನೇರವಾಗಿ ಅನೀಲ ಅವರ ಕಚೇರಿಗೆ ನುಗ್ಗಿದೆ. ಒಳಗೆ ನುಗ್ಗಿದ ತಕ್ಷಣವೇ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ಅನೀಲ ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ಅದೇ ಆಟೋದಲ್ಲಿ ಹಂತಕರು ಎಸ್ಕೇಪ್ ಆಗಿದ್ದಾರೆ.
ಹಣಕಾಸಿನ ವಿಚಾರಕ್ಕೆ ಕೊಲೆ ಶಂಕೆ; ಸ್ಥಳಕ್ಕೆ ಕಮಿಷನರ್ ಭೇಟಿ
ಅನೀಲ ರಾಠೋಡ್ ಅವರು ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರಿಂದ, ಹಣಕಾಸಿನ ವ್ಯವಹಾರದಲ್ಲಿ ಉಂಟಾದ ವೈಷಮ್ಯವೇ ಈ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ. ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕ್ಷ್ಯಗಳ ಪತ್ತೆಗಾಗಿ ಸೂಕೋ ಟೀಮ್ (Soco Team) ಹಾಗೂ ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಂತಕರ ಪತ್ತೆಗಾಗಿ ಬಲೆ ಬೀಸಿದ್ದಾರೆ.