Skip to main content
ವಿಡಿಯೋ
politics

ಬಾಗಲಕೋಟೆಯಲ್ಲಿ ಯತ್ನಾಳ್ ‘ಪಂಚ್’ ಡೈಲಾಗ್ಸ್: ಒಂದೇ ವೇದಿಕೆಯಲ್ಲಿದ್ದ ನಿರಾಣಿ, ಚರಂತಿಮಠ ಕಾಲೆಳೆದ ಬಸವನಗೌಡ!

By Bhavana Gowda
ಬಾಗಲಕೋಟೆಯಲ್ಲಿ ಯತ್ನಾಳ್ ‘ಪಂಚ್’ ಡೈಲಾಗ್ಸ್: ಒಂದೇ ವೇದಿಕೆಯಲ್ಲಿದ್ದ ನಿರಾಣಿ, ಚರಂತಿಮಠ ಕಾಲೆಳೆದ ಬಸವನಗೌಡ!

ಇದೇ ವೇಳೆ ಕಾರ್ಯಕರ್ತರಿಗೆ ಎಚ್ಚರಿಕೆ ಹಾಗೂ ಹಾಸ್ಯದ ದಾಟಿಯಲ್ಲಿ ಕಿವಿಮಾತು ಹೇಳಿದ ಅವರು, "ನೀವು ಈಗ ಒಂದಾಗದಿದ್ದರೆ ಮುಂದೆ ನಿಮಗೆ ಐಪಿಎಲ್ ಟಿಕೆಟ್ ಮಾತ್ರ ಸಿಗುತ್ತವೆ ಹುಷಾರ್!" ಎಂದು ಹೇಳುವ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಬಾಗಲಕೋಟೆ: ಸದಾ ತಮ್ಮ ನೇರ ನುಡಿ ಹಾಗೂ ಖಡಕ್ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಬಾಗಲಕೋಟೆಯಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಸ್ವಪಕ್ಷದ ನಾಯಕರ ಕಾಲೆಳೆಯುವ ಮೂಲಕ ವೇದಿಕೆಯಲ್ಲಿದ್ದ ಮುಖಂಡರಿಗೆ ತೀವ್ರ ಇರಿಸುಮುರಿಸು ಉಂಟುಮಾಡಿದ್ದಾರೆ. ವೇದಿಕೆಯಲ್ಲೇ ಇದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಮಾಜಿ ಶಾಸಕ ಮಲ್ಲಿಕಾರ್ಜುನ ಚರಂತಿಮಠ ಅವರನ್ನೇ ಗುರಿಯಾಗಿಸಿಕೊಂಡು ಯತ್ನಾಳ್ ಆಡಿದ ಮಾತುಗಳು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.

ಪಾಂಡವರ ಕಥೆ ಹೇಳಿ ಚರಂತಿಮಠ ಲೇವಡಿ!

ಸಭೆಯಲ್ಲಿ ಮಾತನಾಡಿದ ಯತ್ನಾಳ್, ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರಸ್ತಾಪಿಸುತ್ತಾ ಮಹಾಭಾರತದ ಉದಾಹರಣೆ ನೀಡಿದರು. "ಎಲ್ಲರ ಮನೆಯಲ್ಲೂ ಅಣ್ಣ-ತಮ್ಮಂದಿರ ಜಗಳ ಇರುತ್ತವೆ. ಮಹಾಭಾರತದಲ್ಲೇ ಜಗಳ ಇತ್ತು, ಪಕ್ಷಾಂತರವೂ ಇರುತ್ತಿತ್ತು" ಎಂದು ಹೇಳುತ್ತಾ ಪಾಂಡವರ ಕಥೆ ಬಿಚ್ಚಿಟ್ಟರು. ಇದೇ ವೇಳೆ ಪಕ್ಕದಲ್ಲೇ ಇದ್ದ ಮಲ್ಲಿಕಾರ್ಜುನ ಚರಂತಿಮಠ ಅವರ ಕಾಲೆಳೆದ ಯತ್ನಾಳ್, "ಬ್ಯಾಡಪ ಅಣ್ಣ... ನಮ್ಮ ನಮ್ಮ ಮನೆಯಲ್ಲೇ ಬೆಂಕಿ ಹಚ್ಚಿದ್ದಾರೆ. ಈಗ ನಮ್ಮ ಮನೆಗೆ ಸಿದ್ದರಾಮಯ್ಯ ಬಂದಿದ್ದಾನೆ. ಸಿದ್ದರಾಮಯ್ಯ ಬಂದ ಕೂಡಲೇ ಇಷ್ಟು ಅಗಲ ಆಯ್ತು..." ಎಂದು ಮಾರ್ಮಿಕವಾಗಿ ಚುಚ್ಚಿದರು.

ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರೇಳದೆ, "ಮುಂದೆ ಎಲೆಕ್ಷನ್ ಆದಮೇಲೆ ಹೋಗಲಿ ಅಲ್ಲಿ... ಆಗ ಯಾರಪ್ಪ ಚರಂತಿಮಠ.. ಮಠ.. ಮಟನ್ ತಿನ್ನೋ ಚಟ ಅವನದು (ಸಿದ್ದರಾಮಯ್ಯ)!" ಎಂದು ಸಿಎಂ ಆಹಾರ ಪದ್ಧತಿಯನ್ನು ಲೇವಡಿ ಮಾಡುವ ಮೂಲಕ ಸಭೆಯಲ್ಲಿ ನಗೆ ಅಲೆ ಎಬ್ಬಿಸಿದರು.

ನಿರಾಣಿ ಕಡೆ ಕೈ ಮಾಡಿ 'ಮೇಟ್ ಮೇಟ್' ಅಂದ್ರು ಯತ್ನಾಳ್!

ತಮ್ಮ ಮತ್ತು ಮುರುಗೇಶ್ ನಿರಾಣಿ ಅವರ ನಡುವಿನ ಹಳೆಯ ರಾಜಕೀಯ ಜಿದ್ದಾಜಿದ್ದನ್ನು ಸಭೆಯಲ್ಲೇ ಬಹಿರಂಗವಾಗಿ ಪ್ರಸ್ತಾಪಿಸಿದ ಯತ್ನಾಳ್, "ನೋಡ್ರಿ, ನಾವೆಲ್ಲ ಎಷ್ಟು ಜಗಳಾಡಿದ್ದವರು ಇಂದು ಒಂದೇ ವೇದಿಕೆಯಲ್ಲಿ ಕುಳಿತಿದ್ದೇವೆ" ಎಂದರು.

ವೇದಿಕೆಯಲ್ಲಿದ್ದ ಮುರುಗೇಶ್ ನಿರಾಣಿ ಅವರ ಕಡೆಗೆ ಕೈ ಮಾಡಿ ತೋರಿಸಿದ ಯತ್ನಾಳ್, "ಎಷ್ಟು ಜಗಳವಾಡಿದವರು ಒಂದೇ ವೇದಿಕೆಯಲ್ಲಿ ಇದ್ದೀವಲ್ಲ? ಹಿಂದೆ ನಾವು ಮುಖಾಮುಖಿ ಹೊಡೆದಾಡಿದವರು ಈಗ ಒಂದಾಗಿದ್ದೀವಲ್ಲ? ಹಾಗಾಗಿ ಕಾರ್ಯಕರ್ತರೇ, ನೀವೂ ಕೂಡ ಈಗ ಎಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗಿ" ಎಂದು ಕರೆ ನೀಡಿದರು.

ಇದೇ ವೇಳೆ ಕಾರ್ಯಕರ್ತರಿಗೆ ಎಚ್ಚರಿಕೆ ಹಾಗೂ ಹಾಸ್ಯದ ದಾಟಿಯಲ್ಲಿ ಕಿವಿಮಾತು ಹೇಳಿದ ಅವರು, "ನೀವು ಈಗ ಒಂದಾಗದಿದ್ದರೆ ಮುಂದೆ ನಿಮಗೆ ಐಪಿಎಲ್ ಟಿಕೆಟ್ ಮಾತ್ರ ಸಿಗುತ್ತವೆ ಹುಷಾರ್!" ಎಂದು ಹೇಳುವ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು. ಒಟ್ಟಿನಲ್ಲಿ ಯತ್ನಾಳ್ ಅವರ ಈ ಭಾಷಣ ಬಿಜೆಪಿಯ ಸ್ಥಳೀಯ ನಾಯಕರಿಗೆ ವೇದಿಕೆಯಲ್ಲೇ ಮುಜುಗರ ತರಿಸಿದ್ದರೂ, ನೆರೆದಿದ್ದ ಕಾರ್ಯಕರ್ತರಿಗೆ ಮಾತ್ರ ಭರಪೂರ ಮನರಂಜನೆ ನೀಡಿತು.