Skip to main content
ವಿಡಿಯೋ
metro

HSRP ನಂಬರ್ ಪ್ಲೇಟ್ ಸದ್ಯಕ್ಕೆ ಕಡ್ಡಾಯವಿಲ್ಲ: ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

By Bhavana Gowda
HSRP ನಂಬರ್ ಪ್ಲೇಟ್ ಸದ್ಯಕ್ಕೆ ಕಡ್ಡಾಯವಿಲ್ಲ: ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

ಸದ್ಯ ಈ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯುತ್ತಿರುವುದರಿಂದ ನಾವು ಸದ್ಯಕ್ಕೆ ಇದನ್ನು ಕಡ್ಡಾಯ ಮಾಡಲು ಸಾಧ್ಯವಿಲ್ಲ.

ಬೆಂಗಳೂರು: ರಾಜ್ಯದಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆ ವಿಚಾರವಾಗಿ ಗೊಂದಲದಲ್ಲಿದ್ದ ವಾಹನ ಸವಾರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಸದ್ಯಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯವಿಲ್ಲ ಎಂದು ಸಚಿವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಂಬರ್ ಪ್ಲೇಟ್ ಹಾಕಿಸಲು ಗಡುವಿನ ಆತಂಕದಲ್ಲಿದ್ದ ಸಾರ್ವಜನಿಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.

ನ್ಯಾಯಾಲಯದಲ್ಲಿದೆ ಪ್ರಕರಣ; ಬಲವಂತ ಮಾಡುವಂತಿಲ್ಲ!

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಸರ್ಕಾರದ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹಂಚಿಕೊಂಡಿದ್ದಾರೆ:

ಕೇಂದ್ರ ಸರ್ಕಾರದ ಕಾನೂನು: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯು ಮೂಲತಃ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನಾಗಿದೆ.

ಕೋರ್ಟ್‌ನಲ್ಲಿ ವಿಚಾರಣೆ: ಸದ್ಯ ಈ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಯುತ್ತಿರುವುದರಿಂದ ನಾವು ಸದ್ಯಕ್ಕೆ ಇದನ್ನು ಕಡ್ಡಾಯ ಮಾಡಲು ಸಾಧ್ಯವಿಲ್ಲ.

ಬಲವಂತವಾಗಿ ಹಾಕಿಸುವಂತಿಲ್ಲ: ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ಯಾರೂ ಕೂಡ ಸಾರ್ವಜನಿಕರಿಗೆ ಬಲವಂತವಾಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿ ಎಂದು ಒತ್ತಾಯ ಮಾಡುವಂತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಆದೇಶ ರದ್ದಾಗಿಲ್ಲ, ಆದರೆ ಕಡ್ಡಾಯವೂ ಇಲ್ಲ!

ಇದೇ ವೇಳೆ ಸಾರ್ವಜನಿಕರಲ್ಲಿ ಮತ್ತಷ್ಟು ಗೊಂದಲ ಮೂಡದಂತೆ ಎಚ್ಚರಿಕೆ ವಹಿಸಿದ ಸಚಿವರು, "ನಾವು ಈ ಆದೇಶವನ್ನು ಹಿಂಪಡೆಯಲು ಬರುವುದಿಲ್ಲ ಮತ್ತು ನಾವಾಗಿಯೇ ಯಾವುದೇ ಆದೇಶವನ್ನು ರದ್ದುಗೊಳಿಸಿಲ್ಲ. ಆದೇಶ ಚಾಲ್ತಿಯಲ್ಲಿದ್ದರೂ, ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಯಾರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ" ಎಂದು ಪರಿಸ್ಥಿತಿಯನ್ನು ವಿವರಿಸಿದರು. ಒಟ್ಟಿನಲ್ಲಿ ಪದೇ ಪದೇ ಗಡುವು ವಿಸ್ತರಣೆಯಾಗುತ್ತಿದ್ದರೂ ನಂಬರ್ ಪ್ಲೇಟ್ ಬದಲಾಯಿಸದಿದ್ದವರಿಗೆ ದಂಡದ ಭೀತಿ ಎದುರಾಗಿತ್ತು. ಆದರೆ ಸಚಿವರ ಈ ಹೇಳಿಕೆಯಿಂದ ಸದ್ಯಕ್ಕೆ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.