ರಾಮನಗರ: ನಗರಸಭೆ ಸದಸ್ಯ ಹಾಗೂ ಸ್ವತಃ ರೌಡಿಶೀಟರ್ ಆಗಿರುವ ಅಜ್ಮತ್ ಎಂಬಾತನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬರ್ಕತ್, ರೌಡಿಶೀಟರ್ ತುಫೈಲ್ ಖಾನ್, ಅರ್ಬಾಜ್, ಸಯ್ಯದ್ ಹಾಗೂ ಹೈದರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರನ್ನೂ ರಾಮನಗರ ಟೌನ್ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಡೆದಿದ್ದೇನು?
ಕಳೆದ ಮಾರ್ಚ್ 27ರಂದು ಸಾರ್ವಜನಿಕ ಸ್ಥಳದಲ್ಲೇ ನಗರಸಭೆ ಸದಸ್ಯ ಅಜ್ಮತ್ ಮೇಲೆ ಈ ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಲಾಂಗು, ಮಚ್ಚುಗಳನ್ನು ಹಿಡಿದು ಹಾಡಹಗಲೇ ಅಜ್ಮತ್‌ನನ್ನು ಕೊಲೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದರು. ಆದರೆ ಸ್ವಲ್ಪದರಲ್ಲೇ ಅಜ್ಮತ್ ಅಲ್ಲಿಂದ ಎಸ್ಕೇಪ್ ಆಗಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ.
ಕಾರು, ಬೈಕ್‌ಗಳು ಪುಡಿಪುಡಿ!
ಅಜ್ಮತ್ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದರಿಂದ ರೊಚ್ಚಿಗೆದ್ದ ದುಷ್ಕರ್ಮಿಗಳ ತಂಡ, ಆತನ ಮನೆ ಬಳಿ ತೆರಳಿತ್ತು. ಅಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಕಾರುಗಳನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪರಾರಿಯಾಗಿತ್ತು. ಈ ಭೀಕರ ಘಟನೆ ಇಡೀ ರಾಮನಗರದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಘಟನೆಗೆ ಸಂಬಂಧಿಸಿದಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಲೆ ಯತ್ನಕ್ಕೆ ಅಸಲಿ ಕಾರಣವೇನು?
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಕೊಲೆ ಯತ್ನದ ಹಿಂದಿನ ಅಸಲಿ ಕಾರಣ ಬಯಲಾಗಿದೆ. ಬಂಧಿತ ಆರೋಪಿಗಳಲ್ಲಿ ಪ್ರಮುಖನಾದ ಬರ್ಕತ್ ಎಂಬಾತನ ಅಕ್ಕ ತಬಸ್ಸುಮ್‌ಗೆ ನಗರಸಭೆ ಸದಸ್ಯ ಅಜ್ಮತ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ತನ್ನ ಅಕ್ಕನಿಗೆ ಆಗುತ್ತಿದ್ದ ಕಿರುಕುಳದಿಂದ ಆಕ್ರೋಶಗೊಂಡಿದ್ದ ಬರ್ಕತ್, ಅಜ್ಮತ್‌ನನ್ನು ಮುಗಿಸಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ರೌಡಿಶೀಟರ್ ತುಫೈಲ್ ಖಾನ್ ಸೇರಿದಂತೆ ತನ್ನ ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡು ಮಾರ್ಚ್ 27ರಂದು ಅಟ್ಯಾಕ್ ಮಾಡಿದ್ದ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಐವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.