Skip to main content
ವಿಡಿಯೋ
crime

ಲೇಡಿ ಪಿಎಸ್‌ಐ ಮೇಲೆಯೇ ಹಲ್ಲೆಗೆ ಯತ್ನ! ರಾಜಕೀಯ ಒತ್ತಡಕ್ಕೆ ಮಣಿದರೇ ಹಿರಿಯ ಪೊಲೀಸ್ ಅಧಿಕಾರಿಗಳು?

By Bhavana Gowda
ಲೇಡಿ ಪಿಎಸ್‌ಐ ಮೇಲೆಯೇ ಹಲ್ಲೆಗೆ ಯತ್ನ! ರಾಜಕೀಯ ಒತ್ತಡಕ್ಕೆ ಮಣಿದರೇ ಹಿರಿಯ ಪೊಲೀಸ್ ಅಧಿಕಾರಿಗಳು?

ಆಲಂಬಗಿರಿಯ ನಿವಾಸಿಗಳಾದ ನಾಗೇಂದ್ರ, ನವೀನ್, ಪುನೀತ್ ಹಾಗೂ ನರೇಂದ್ರ ಎಂಬುವವರೇ ಪಿಎಸ್‌ಐ ನಾಗಮ್ಮ ಮತ್ತು ಸಿಬ್ಬಂದಿ ಮೇಲೆ ದರ್ಪ ತೋರಿ ಹಲ್ಲೆಗೆ ಯತ್ನಿಸಿದ ಆರೋಪಿಗಳು. ಸದ್ಯ ಇವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೇ ರಕ್ಷಣೆ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆಯೊಂದು ಈಗ ತೀವ್ರವಾಗಿ ಎದ್ದಿದೆ. ಕರ್ತವ್ಯ ನಿರತ ಮಹಿಳಾ ಸಬ್ ಇನ್ಸ್‌ಪೆಕ್ಟರ್ (PSI) ಒಬ್ಬರಿಗೆ ದಮ್ಕಿ ಹಾಕಿ, ಹಲ್ಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ನಡೆದಿದೆ.

ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗಂಭೀರವಾಗಿ ಗಮನಿಸಲೇಬೇಕಾದ ವಿಷಯ ಇದು!

ಕಳೆದ ಏಪ್ರಿಲ್ 3ರಂದು ಬೆಳಗಿನ ಜಾವ ಸುಮಾರು 12:40ರ ಸಮಯದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿಯಾದರೂ ಹೋಟೆಲ್ ತೆರೆದಿದ್ದನ್ನು ಪ್ರಶ್ನಿಸಿದಕ್ಕೆ ಪುಂಡರ ತಂಡವೊಂದು ಕ್ಯಾತೆ ತೆಗೆದಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಮ್ಮ ಹಾಗೂ ಜೀಪ್ ಡ್ರೈವರ್ ವೇಣುಗೋಪಾಲ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಆಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂಬ ಕನಿಷ್ಠ ಗೌರವವೂ ಇಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ದಮ್ಕಿ ಹಾಕಿದ್ದಾರೆ. ಈ ಪುಂಡರ ದರ್ಬಾರಿನ ವೀಡಿಯೋ ಕೂಡ ಈಗ ಲಭ್ಯವಾಗಿದೆ.

ದಮ್ಕಿ ಹಾಕಿದ ವೀರರು ಯಾರು?

ಆಲಂಬಗಿರಿಯ ನಿವಾಸಿಗಳಾದ ನಾಗೇಂದ್ರ, ನವೀನ್, ಪುನೀತ್ ಹಾಗೂ ನರೇಂದ್ರ ಎಂಬುವವರೇ ಪಿಎಸ್‌ಐ ನಾಗಮ್ಮ ಮತ್ತು ಸಿಬ್ಬಂದಿ ಮೇಲೆ ದರ್ಪ ತೋರಿ ಹಲ್ಲೆಗೆ ಯತ್ನಿಸಿದ ಆರೋಪಿಗಳು. ಸದ್ಯ ಇವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ರಾ ಹಿರಿಯ ಅಧಿಕಾರಿಗಳು?

ಈ ಗಂಭೀರ ಘಟನೆ ನಡೆದು ಮೂರು ದಿನಗಳು ಕಳೆದರೂ ಕೂಡ ಪೊಲೀಸರು ಆರೋಪಿಗಳನ್ನು ಬಂಧಿಸದೇ ಇರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇವಲ ಎಫ್‌ಐಆರ್ ದಾಖಲಿಸಿ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಗಪ್‌ಚುಪ್ ಆಗಿ ಕುಳಿತಿದ್ದಾರೆ. ಮಹಿಳಾ ಅಧಿಕಾರಿಯ ಮೇಲೆಯೇ ಹಲ್ಲೆಗೆ ಯತ್ನ ನಡೆದಿದ್ದರೂ ಕೂಡ ಪ್ರಕರಣವನ್ನು ಮುಚ್ಚಿಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳು ಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗಿವೆ.

ರಾಜಕೀಯ ಒತ್ತಡದ ಶಂಕೆ!

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಬಂಧನಕ್ಕೆ ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ, ಪೊಲೀಸರು ಯಾವುದಾದರೂ ಪ್ರಭಾವಿ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಗೆ ರಕ್ಷಣೆ ನೀಡಲು ಮೀನಾಮೇಷ ಎಣಿಸುತ್ತಿರುವ ಇಲಾಖೆ, ಇನ್ನು ಸಾಮಾನ್ಯ ಜನರ ರಕ್ಷಣೆಯನ್ನು ಹೇಗೆ ಮಾಡುತ್ತದೆ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.