ಹುಬ್ಬಳ್ಳಿ: ನಗರದ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮುಫೀಸ್ ಮಿಯಾನ್ನವರ್ ಎಂಬಾತನ ಮೇಲಿನ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಕ್ಕೀಗ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಕೆಲವು ವೀಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಕರಣದ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗುವಂತೆ ಮಾಡಿದೆ.
ವೀಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವೀಡಿಯೋದಲ್ಲಿ ಸಂತ್ರಸ್ತ ಯುವತಿ ಕಣ್ಣೀರಿಡುತ್ತಾ ತನಗೆ ಎದುರಾದ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಯುವಕನ ಮನೆಯವರು ಮದುವೆಗೆ ಒಪ್ಪದಿದ್ದಾಗ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೆ, ತಾವಿಬ್ಬರೂ ಧಾರವಾಡದಲ್ಲಿ ರಿಜಿಸ್ಟರ್ ಮದುವೆಗೆ ಅರ್ಜಿ ಸಲ್ಲಿಸಿದ್ದೆವು. ರಿಜಿಸ್ಟ್ರೇಷನ್ ಪ್ರಕ್ರಿಯೆಗೆ ಮುಫೀಸ್ ಮನೆಯವರೂ ಬಂದಿದ್ದರು ಎಂದು ಯುವತಿ ವೀಡಿಯೋದಲ್ಲಿ ತಿಳಿಸಿದ್ದಾಳೆ.
ಹಿಂದೂ ಸಂಘಟನೆಗಳ ಎಂಟ್ರಿ; ಕೌನ್ಸಿಲಿಂಗ್?
ಧಾರವಾಡದಲ್ಲಿ ಮದುವೆ ರಿಜಿಸ್ಟರ್ ಆಗಲು ಇನ್ನು 30 ದಿನಗಳ ಸಮಯ ಬಾಕಿ ಇತ್ತು. ಆ ವೇಳೆ ನಮ್ಮ ಮನೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಂದಿದ್ದರು. ಆ ನಂತರ ನನ್ನನ್ನು ಬೇರೆ ಮನೆಗೆ ಕರೆದೊಯ್ದು ಕೌನ್ಸಿಲಿಂಗ್ ನಡೆಸಲಾಗಿತ್ತು ಎಂದು ಯುವತಿ ವೀಡಿಯೋದಲ್ಲಿ ವಿವರಿಸಿದ್ದಾಳೆ. ಮುಫೀಸ್ ವಿರುದ್ಧ ದೂರು ನೀಡಲು ನನ್ನ ಒಪ್ಪಿಗೆ ಇರಲಿಲ್ಲ ಎಂಬ ಸ್ಫೋಟಕ ವಿಷಯವನ್ನೂ ಆಕೆ ವೀಡಿಯೋದಲ್ಲಿ ಬಾಯಿಬಿಟ್ಟಿದ್ದಾಳೆ.
ದೂರು ನೀಡಲು ಬಲವಂತ ಮಾಡಲಾಯ್ತಾ?
ಈ ಎಲ್ಲಾ ಬೆಳವಣಿಗೆಗಳು ನಡೆದ ಬಳಿಕ ಯುವತಿ ಈಗ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಮುಫೀಸ್ ವಿರುದ್ಧ ದೂರು ದಾಖಲಿಸಿದ್ದಾಳೆ. ಮುಫೀಸ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಹಾಗೂ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಯುವತಿಯ ಹಳೆಯ ವೀಡಿಯೋಗಳು ಈಗ ಹೊರಬಂದಿರುವುದರಿಂದ, ಆಕೆಯಿಂದ ಬಲವಂತವಾಗಿ ದೂರು ಕೊಡಿಸಲಾಗಿದೆಯೇ ಅಥವಾ ಇದರ ಹಿಂದೆ ಬೇರೇನಾದರೂ ಒತ್ತಡಗಳಿವೆಯೇ ಎಂಬ ಬಲವಾದ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಠಾಣೆಯ ಪೊಲೀಸರು ಈ ವೈರಲ್ ವೀಡಿಯೋ ಹಾಗೂ ಯುವತಿಯ ಹೇಳಿಕೆಗಳ ಸತ್ಯಾಸತ್ಯತೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.