Skip to main content
ವಿಡಿಯೋ
local

ಏಪ್ರಿಲ್ 16 ರಿಂದ ಮನೆಮನೆ ಜನಗಣತಿ ಆರಂಭ; ಗೈರಾಗುವ ಸಿಬ್ಬಂದಿಗೆ ಕ್ರಿಮಿನಲ್ ಕೇಸ್ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ!

By Bhavana Gowda
ಏಪ್ರಿಲ್ 16 ರಿಂದ ಮನೆಮನೆ ಜನಗಣತಿ ಆರಂಭ; ಗೈರಾಗುವ ಸಿಬ್ಬಂದಿಗೆ ಕ್ರಿಮಿನಲ್ ಕೇಸ್ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ!

ನಗರದಲ್ಲಿ ಏಪ್ರಿಲ್ 16 ರಿಂದ ಮೇ 15 ರವರೆಗೆ ಒಂದು ತಿಂಗಳ ಕಾಲ ವಸತಿ ಮತ್ತು ಮನೆಪಟ್ಟಿ ಗಣತಿ ಕಾರ್ಯ ನಡೆಯಲಿದೆ. ಈ ಬೃಹತ್ ಸಮೀಕ್ಷಾ ಕಾರ್ಯಕ್ಕಾಗಿ ಒಟ್ಟು 4,678 ಗಣತಿದಾರರು ಹಾಗೂ 798 ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಬೆಂಗಳೂರು: ಬಹುನಿರೀಕ್ಷಿತ ‘ರಾಷ್ಟ್ರೀಯ ಜನಗಣತಿ-2027’ರ ಪೂರ್ವಭಾವಿ ಕಾರ್ಯಗಳು ನಗರದಲ್ಲಿ ಅಧಿಕೃತವಾಗಿ ಚುರುಕುಗೊಂಡಿವೆ. ಇದೇ ಬರುವ ಏಪ್ರಿಲ್ 16 ರಿಂದ ನಗರದಾದ್ಯಂತ ಮನೆಮನೆ ವಸತಿ ಮತ್ತು ಮನೆಪಟ್ಟಿ ಗಣತಿ ಕಾರ್ಯ ಆರಂಭವಾಗಲಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಇದರ ಜೊತೆಗೆ ಜನಗಣತಿ ಕಾರ್ಯಕ್ಕೆ ಗೈರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 16 ರಿಂದ ಮೇ 15 ರವರೆಗೆ ಮಹಾ ಸಮೀಕ್ಷೆ

ನಗರದಲ್ಲಿ ಏಪ್ರಿಲ್ 16 ರಿಂದ ಮೇ 15 ರವರೆಗೆ ಒಂದು ತಿಂಗಳ ಕಾಲ ವಸತಿ ಮತ್ತು ಮನೆಪಟ್ಟಿ ಗಣತಿ ಕಾರ್ಯ ನಡೆಯಲಿದೆ. ಈ ಬೃಹತ್ ಸಮೀಕ್ಷಾ ಕಾರ್ಯಕ್ಕಾಗಿ ಒಟ್ಟು 4,678 ಗಣತಿದಾರರು ಹಾಗೂ 798 ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಗೈರಾದರೆ ಅಮಾನತು ಮಾತ್ರವಲ್ಲ, ಕ್ರಿಮಿನಲ್ ಕೇಸ್!

ಈ ಸಮೀಕ್ಷೆಗೆ ಸಂಬಂಧಿಸಿದಂತೆ ಏಪ್ರಿಲ್ 6 ರಿಂದ ಏಪ್ರಿಲ್ 8 ರವರೆಗೆ ನಗರದ 16 ವಿವಿಧ ಕೇಂದ್ರಗಳಲ್ಲಿ ತರಬೇತಿ ಶಿಬಿರಗಳು ನಡೆಯಲಿವೆ. ಈ ತರಬೇತಿಗೆ ನಿಯೋಜಿತ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕೆಂದು ಆದೇಶಿಸಲಾಗಿದೆ. ಒಂದು ವೇಳೆ ಯಾರಾದರೂ ಗೈರುಹಾಜರಾದರೆ ಅಥವಾ ಕರ್ತವ್ಯ ಲೋಪ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಜನಗಣತಿ ಕಾಯ್ದೆ, 1948 ರ ಸೆಕ್ಷನ್ 11 ರ ಅಡಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023 ರ ಕಲಂ 223 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ.

ಇದರೊಂದಿಗೆ ದುರ್ನಡತೆ ಅಥವಾ ಅವಿಧೇಯತೆ ತೋರುವ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಕಟ್ಟುನಿಟ್ಟಿನ ನಿರ್ಧಾರ ಮಾಡಿದೆ. ರಾಷ್ಟ್ರೀಯ ಮಹತ್ವದ ಈ ಜನಗಣತಿ ಕಾರ್ಯವನ್ನು ಅತ್ಯಂತ ನಿಖರವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಸಲು ಆಡಳಿತ ಮಂಡಳಿ ಸರ್ವ ಸನ್ನದ್ಧವಾಗಿದೆ.