Skip to main content
ವಿಡಿಯೋ
crime

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮಹಿಳಾ ಆಯೋಗಕ್ಕೆ ದೂರು!

By Bhavana Gowda
ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಮಹಿಳಾ ಆಯೋಗಕ್ಕೆ ದೂರು!

ದೈಹಿಕ ಮತ್ತು ಮಾನಸಿಕ ಶೋಷಣೆ ನೀಡುತ್ತಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಕೂಡಲಸಂಗಮದ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ?

ಸಂತ್ರಸ್ತ ಮಹಿಳೆಯು ನೀಡಿರುವ ದೂರಿನ ಪ್ರಕಾರ, ಸ್ವಾಮೀಜಿಯವರು ಬೆಂಗಳೂರಿಗೆ ಬಂದಾಗ ಪರಿಚಯವಾಗಿತ್ತು. ಅವರ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂದಿದ್ದ ಮಹಿಳೆಯನ್ನು ಸ್ವಾಮೀಜಿ ಮಠಕ್ಕೆ ಆಹ್ವಾನಿಸಿದ್ದರು. ಮಠಕ್ಕೆ ಹೋದ ಸಂದರ್ಭದಲ್ಲಿ 'ಪ್ರಸಾದ ನೀಡುತ್ತೇನೆ' ಎಂದು ನಂಬಿಸಿ, ವಿಶ್ವಾಸ ದುರುಪಯೋಗಪಡಿಸಿಕೊಂಡು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಖಾಸಗಿ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್ ಆರೋಪ

ದೂರಿನಲ್ಲಿ ಉಲ್ಲೇಖಿಸಲಾದ ಅತ್ಯಂತ ಆಘಾತಕಾರಿ ಅಂಶವೆಂದರೆ ಖಾಸಗಿ ವಿಡಿಯೋಗಳ ಕುರಿತಾದ ಬೆದರಿಕೆ.

ದೌರ್ಜನ್ಯ ನಡೆಸುವ ಸಂದರ್ಭದಲ್ಲಿ ಅರಿವಿಲ್ಲದಂತೆ ಖಾಸಗಿ ವಿಡಿಯೋ ಚಿತ್ರೀಕರಿಸಲಾಗಿದೆ.ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕುತ್ತಿದ್ದಾರೆ.ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ. "ಸ್ವಾಮೀಜಿಯವರು ಅಸಭ್ಯ ಪದಗಳನ್ನು ಬಳಸಿ ನನ್ನ ಮೈ ಮುಟ್ಟುತ್ತಿದ್ದರು. ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದರಿಂದ ನಾನು ತೀವ್ರ ಮಾನಸಿಕ ಒತ್ತಡ ಮತ್ತು ಭಯದಲ್ಲಿದ್ದೇನೆ," ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ವಿವರಿಸಿದ್ದಾರೆ.

ತನಿಖೆಗೆ ಆಗ್ರಹ

ದೈಹಿಕ ಮತ್ತು ಮಾನಸಿಕ ಶೋಷಣೆ ನೀಡುತ್ತಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಗಂಭೀರ ಆರೋಪವು ಈಗ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸ್ವಾಮೀಜಿಯವರ ಪರವಾಗಿ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಮಹಿಳಾ ಆಯೋಗವು ಈ ದೂರನ್ನು ಆಧರಿಸಿ ಮುಂದಿನ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.