Skip to main content
ವಿಡಿಯೋ
crime

ಸಾರಾಯಿ ಕುಡಿದು ಕಚೇರಿಯಲ್ಲೇ ಮಲಗಿದ ಗ್ಯಾಸ್ ಏಜೆನ್ಸಿ ಸಿಬ್ಬಂದಿ; ಸಿಲಿಂಡರ್ ಇಲ್ಲದೆ ಜನರ ಪರದಾಟ, ಸಿಬ್ಬಂದಿಗೆ ಧರ್ಮದೇಟು!

By Bhavana Gowda
ಸಾರಾಯಿ ಕುಡಿದು ಕಚೇರಿಯಲ್ಲೇ ಮಲಗಿದ ಗ್ಯಾಸ್ ಏಜೆನ್ಸಿ ಸಿಬ್ಬಂದಿ; ಸಿಲಿಂಡರ್ ಇಲ್ಲದೆ ಜನರ ಪರದಾಟ, ಸಿಬ್ಬಂದಿಗೆ ಧರ್ಮದೇಟು!

"ನಾವು ಯಾರೂ ಆತನ ಮೇಲೆ ಹಲ್ಲೆ ಮಾಡಿಲ್ಲ. ಆತನ ವರ್ತನೆಯಿಂದ ಬೇಸತ್ತ ಆತನ ಸ್ವಂತ ಸಂಬಂಧಿಕರೇ ಆತನಿಗೆ ಹೊಡೆದಿದ್ದಾರೆ. ಆದರೆ ಈಗ ನಮ್ಮ ಮೇಲೆ ಹಲ್ಲೆಯ ಆರೋಪ ಹೊರಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕೇರವಾಡ ಗುಂಡೆನಟ್ಟಿ ಗ್ರಾಮದಲ್ಲಿ ಗ್ಯಾಸ್ ಏಜೆನ್ಸಿ ಸಿಬ್ಬಂದಿಯೊಬ್ಬನ ಬೇಜವಾಬ್ದಾರಿತನದಿಂದ ಸಾರ್ವಜನಿಕರು ಆಕ್ರೋಶಗೊಂಡ ಘಟನೆ ನಡೆದಿದೆ. ಅಡುಗೆ ಅನಿಲ (LPG) ಸಿಲಿಂಡರ್ ಪಡೆಯಲು ಬಂದ ಜನರಿಗೆ ಸಿಬ್ಬಂದಿ ಸಾರಾಯಿ ಕುಡಿದು ಕಚೇರಿಯಲ್ಲೇ ಮಲಗುವ ಮೂಲಕ ದರ್ಶನ ನೀಡಿದ್ದಾನೆ.

ಮೂದಿನಾಲ್ಕು ದಿನಗಳಿಂದ ಜನರ ಪರದಾಟ

ಹಂದೂರ ಗ್ರಾಮದ ಚಂದ್ರಶೇಖರ ತಳವಾರ ಎಂಬಾತ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಗ್ಯಾಸ್ ಕೇಳಲು ಬಂದವರಿಗೆ "ಸ್ಟಾಕ್ ಇಲ್ಲ" ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದ. ಇದರಿಂದ ಗ್ರಾಮೀಣ ಭಾಗದ ಜನ ಅಡುಗೆ ಮಾಡಲು ಪರದಾಡುವಂತಾಗಿತ್ತು.

ಕಚೇರಿಯಲ್ಲೇ ಸಾರಾಯಿ ನಶೆಯಲ್ಲಿ ಮಲಗಿದ್ದ ಸಿಬ್ಬಂದಿ!

ಇಂದು ಜನರು ಗ್ಯಾಸ್‌ಗಾಗಿ ಕಚೇರಿಗೆ ಬಂದಾಗ ಸಿಬ್ಬಂದಿ ಚಂದ್ರಶೇಖರ ಮದ್ಯ ಸೇವಿಸಿ ಕಚೇರಿಯಲ್ಲೇ ಮಲಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಗ್ಯಾಸ್ ಪಾಸ್‌ಬುಕ್‌ಗಳನ್ನು ಎಲ್ಲೆಂದರಲ್ಲಿ ಚೆಲ್ಲಿ ಅಸ್ತವ್ಯಸ್ತ ಮಾಡಿದ್ದ. ಇದನ್ನು ಪ್ರಶ್ನಿಸಿದ ಜನರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಉಡಾಫೆ ಉತ್ತರ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಸ್ಥಳೀಯರಿಂದ ವಿಡಿಯೋ; ಸಿಬ್ಬಂದಿಗೆ ಬಿತ್ತು ಧರ್ಮದೇಟು

ಸಿಬ್ಬಂದಿಯ ಈ ವರ್ತನೆಯನ್ನು ಕಂಡು ಕೆರಳಿದ ಸಾರ್ವಜನಿಕರು ಆತನ ಅದ್ವಾನದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸಿಬ್ಬಂದಿ ಚಂದ್ರಶೇಖರನಿಗೆ ಜನರು ಧರ್ಮದೇಟು ನೀಡಿದ್ದಾರೆ.

ಗ್ರಾಮಸ್ಥರ ಸ್ಪಷ್ಟನೆ:

"ನಾವು ಯಾರೂ ಆತನ ಮೇಲೆ ಹಲ್ಲೆ ಮಾಡಿಲ್ಲ. ಆತನ ವರ್ತನೆಯಿಂದ ಬೇಸತ್ತ ಆತನ ಸ್ವಂತ ಸಂಬಂಧಿಕರೇ ಆತನಿಗೆ ಹೊಡೆದಿದ್ದಾರೆ. ಆದರೆ ಈಗ ನಮ್ಮ ಮೇಲೆ ಹಲ್ಲೆಯ ಆರೋಪ ಹೊರಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅಗತ್ಯ ಸೇವೆಯಾದ ಗ್ಯಾಸ್ ವಿತರಣೆಯಲ್ಲಿ ಇಂತಹ ಬೇಜವಾಬ್ದಾರಿತನ ತೋರುತ್ತಿರುವ ಏಜೆನ್ಸಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇರವಾಡ ಗುಂಡೆನಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.