ತೆಹ್ರಾನ್: ಕಳೆದ ಕೆಲವು ವಾರಗಳಿಂದ ಜಗತ್ತನ್ನೇ ಆತಂಕಕ್ಕೆ ತಳ್ಳಿದ್ದ ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧ ಕಾರ್ಮೋಡ ಸದ್ಯಕ್ಕೆ ಸರಿದಿದೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ತಮ್ಮ ಎಲ್ಲಾ ಮಿಲಿಟರಿ ಘಟಕಗಳಿಗೆ ಯುದ್ಧ ಕಾರ್ಯಗಳನ್ನು ತಕ್ಷಣವೇ ನಿಲ್ಲಿಸುವಂತೆ ಐತಿಹಾಸಿಕ ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಕುಸಿತ ಕಂಡಿದ್ದು, ವಿಶ್ವದ ಆರ್ಥಿಕತೆಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
ಖಮೇನಿ ಆದೇಶದಲ್ಲಿ ಏನಿದೆ?
ಸರ್ಕಾರಿ ಮಾಧ್ಯಮವಾದ ಐಆರ್‌ಐಬಿ (IRIB) ಮೂಲಕ ಈ ಆದೇಶ ಹೊರಬಿದ್ದಿದೆ. "ಇದು ಯುದ್ಧದ ಸಂಪೂರ್ಣ ಅಂತ್ಯವಲ್ಲದಿದ್ದರೂ, ಸದ್ಯಕ್ಕೆ ಎಲ್ಲಾ ಘಟಕಗಳು ದಾಳಿಯನ್ನು ನಿಲ್ಲಿಸಬೇಕು" ಎಂದು ಖಮೇನಿ ಸೂಚಿಸಿದ್ದಾರೆ. ಟ್ರಂಪ್ ಅವರ ಯುದ್ಧ ನೀತಿಯ ವಿರುದ್ಧ ಇರಾನ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು, ಆದರೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಪ್ರತಿಭಟನೆಗಳು ಸಂಭ್ರಮಾಚರಣೆಯಾಗಿ ಬದಲಾಗಿವೆ. ಸಾವಿರಾರು ಜನರು ರಸ್ತೆಗಿಳಿದು ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ.
ತೈಲ ಬೆಲೆ ಶೇ. 19ರಷ್ಟು ಕುಸಿತ!
ಕದನ ವಿರಾಮದ ಘೋಷಣೆಯಾಗುತ್ತಿದ್ದಂತೆಯೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಪ್ರತಿ ಬ್ಯಾರಲ್‌ಗೆ 103.42 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ ಸದ್ಯ 95 ಡಾಲರ್‌ಗೆ ಇಳಿಕೆಯಾಗಿದೆ. ಅಂದರೆ ಒಂದೇ ಸಮನೆ ಶೇ. 19ರಷ್ಟು ಬೆಲೆ ಇಳಿಕೆಯಾಗಿದ್ದು, ಭಾರತದಂತಹ ಆಮದು ರಾಷ್ಟ್ರಗಳಿಗೆ ಇದು ವರದಾನವಾಗಲಿದೆ.
ಹಾರ್ಮಜ್ ಜಲಸಂಧಿ ಓಪನ್: ಆದರೆ ಇನ್ಮುಂದೆ 'ಟೋಲ್' ಕಟ್ಟಬೇಕು!
ಕಳೆದ ಐದು ವಾರಗಳಿಂದ ಮುಚ್ಚಲ್ಪಟ್ಟಿದ್ದ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗ 'ಹಾರ್ಮಜ್ ಜಲಸಂಧಿ' (Strait of Hormuz) ಯನ್ನು ತಕ್ಷಣವೇ ಸುರಕ್ಷಿತವಾಗಿ ತೆರೆಯಲು ಇರಾನ್ ಸಮ್ಮತಿಸಿದೆ. ಆದರೆ, ಇರಾನ್ ಇಲ್ಲಿ ಒಂದು ಹೊಸ ಮಾಸ್ಟರ್ ಪ್ಲಾನ್ ಮಾಡಿದೆ.
ಈ ಜಲಸಂಧಿಯಲ್ಲಿ ಇನ್ಮುಂದೆ ಸಾಗುವ ಹಡಗುಗಳಿಗೆ 'ಟೋಲ್' ವಿಧಿಸಲು ಇರಾನ್ ನಿರ್ಧರಿಸಿದೆ. ಪ್ರತಿ ಹಡಗಿಗೆ ಸುಮಾರು 2 ಮಿಲಿಯನ್ ಡಾಲರ್ (ಸುಮಾರು 19 ಕೋಟಿ ರೂಪಾಯಿ) ಟ್ಯಾಕ್ಸ್ ವಿಧಿಸುವ ಸಾಧ್ಯತೆ ಇದೆ. ಇರಾನ್‌ನ ಈ ನಿರ್ಧಾರವು ಸಮುದ್ರ ಮಾರ್ಗದ ವ್ಯಾಪಾರದ ಮೇಲೆ ಆರ್ಥಿಕ ಪರಿಣಾಮ ಬೀರಲಿದೆ.
ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನ!
ಈ ಸಂಧಾನ ಮಾತುಕತೆಯಲ್ಲಿ ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆ ವಹಿಸಿದೆ ಎಂಬುದು ವಿಶೇಷ. ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಹಿಡಿತವಿದೆ ಎಂದು ತೋರಿಸಿಕೊಳ್ಳಲು ಮತ್ತು ತನ್ನದೇ ಆದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನ ಈ ಸಂಧಾನವನ್ನು 'ಸ್ವಕಾರ್ಯ ಮತ್ತು ಸ್ವಾಮಿ ಕಾರ್ಯ' ಎರಡಕ್ಕೂ ಬಳಸಿಕೊಂಡಿದೆ. ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆಯಾಗುವುದು ಪಾಕಿಸ್ತಾನದ ಆರ್ಥಿಕ ಹಿತಾಸಕ್ತಿಗೂ ಅಗತ್ಯವಾಗಿತ್ತು.
ಇರಾಕ್ ಸ್ವಾಗತ
ನೆರೆಯ ರಾಷ್ಟ್ರವಾದ ಇರಾಕ್ ಈ ಕದನ ವಿರಾಮವನ್ನು ಮುಕ್ತಕಂಠದಿಂದ ಸ್ವಾಗತಿಸಿದೆ. "ಇದು ಪ್ರಾದೇಶಿಕ ಶಾಂತಿಗೆ ಒಂದು ಸಕಾರಾತ್ಮಕ ಹೆಜ್ಜೆ. ಪರಸ್ಪರ ನಂಬಿಕೆ ಬೆಳೆಸಲು ಸುಸ್ಥಿರ ಸಂವಾದ ನಡೆಸಿ, ಮತ್ತೆ ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಿ" ಎಂದು ಇರಾಕ್ ಮನವಿ ಮಾಡಿದೆ. ಒಟ್ಟಾರೆಯಾಗಿ, ಯುದ್ಧದ ಭೀತಿಯಲ್ಲಿದ್ದ ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ಜಾಗತಿಕ ಮಾರುಕಟ್ಟೆ ಚೇತರಿಕೆಯ ಹಾದಿಯಲ್ಲಿದೆ.