ಮೈಸೂರು: ರಾಜ್ಯದಲ್ಲಿ ಉಂಟಾಗಿರುವ ಎಲ್‌ಪಿಜಿ (LPG) ಗ್ಯಾಸ್ ಅಭಾವವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಧನ ಪೂರೈಕೆ ಮತ್ತು ದರ ನಿಯಂತ್ರಣದ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಬಿಜೆಪಿ ನಾಯಕರು ಆಟೋ ಚಾಲಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂಧನ ಪೂರೈಕೆ ಮಾಡುವುದು ಕೇಂದ್ರ ಸರ್ಕಾರ, ರಾಜ್ಯವಲ್ಲ!
"ಇಂಧನ ಪೂರೈಕೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಬಿಜೆಪಿ ನಾಯಕರು ಕೇಂದ್ರವನ್ನು ಪ್ರಶ್ನಿಸುವ ಬದಲು ರಾಜ್ಯ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಇದು ಶುದ್ಧ ಷಡ್ಯಂತ್ರ. ಕರ್ನಾಟಕದಲ್ಲಿ ಒಟ್ಟು 372 ಎಲ್‌ಪಿಜಿ ಗ್ಯಾಸ್ ಬಂಕ್‌ಗಳಿವೆ. ಈ ಬಂಕ್‌ಗಳಿಗೆ ಗ್ಯಾಸ್ ಸರಬರಾಜು ಮಾಡುವುದು ಆಯಿಲ್ ಕಂಪನಿಗಳು. ಈ ಸರಬರಾಜು ಪ್ರಕ್ರಿಯೆ ಕೇಂದ್ರದ ಅಡಿಯಲ್ಲಿ ಬರುತ್ತದೆ ಎಂಬುದು ಇವರಿಗೆ ತಿಳಿದಿಲ್ಲವೇ?" ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಬ್ಲಾಕ್ ಮಾರ್ಕೆಟ್‌ನಲ್ಲಿ ಕೆ.ಜಿ ಗ್ಯಾಸ್‌ಗೆ 162 ರೂಪಾಯಿ!
ಗ್ಯಾಸ್ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ ಅವರು, "ಕಳೆದ ಒಂದು ತಿಂಗಳ ಹಿಂದೆ ಒಂದು ಕೆ.ಜಿ ಗ್ಯಾಸ್ ಬೆಲೆ 60 ರೂಪಾಯಿ ಇತ್ತು. ಆದರೆ ಈಗ ಅದು ಬ್ಲಾಕ್ ಮಾರ್ಕೆಟ್‌ನಲ್ಲಿ 162 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ರಾಜ್ಯದ ಸುಮಾರು 5 ಲಕ್ಷ ಆಟೋ ಚಾಲಕರು ಮತ್ತು ಗಿಗ್ ವರ್ಕರ್ಸ್ (Gig Workers) ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆಲೆ ಏರಿಕೆ ಮತ್ತು ಅಭಾವಕ್ಕೆ ಕೇಂದ್ರದ ತಪ್ಪು ನೀತಿಗಳೇ ಕಾರಣ" ಎಂದು ದೂರಿದರು.
ಕೇಂದ್ರ ಸಚಿವರ ಮೌನಕ್ಕೆ ಆಕ್ಷೇಪ
ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರ ವಿರುದ್ಧ ಹರಿಹಾಯ್ದ ಲಕ್ಷ್ಮಣ್, "ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಸಮಸ್ಯೆ ಎದುರಾಗಿದ್ದರೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ತುಟಿ ಬಿಚ್ಚುತ್ತಿಲ್ಲ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವೇ ಆಟೋ ಚಾಲಕರಿಗೆ ಪರಿಹಾರ ನೀಡಬೇಕು ಎನ್ನುತ್ತಾರೆ. ಇಂಧನ ಪೂರೈಕೆ ಕೇಂದ್ರದ ಕೆಲಸವಾಗಿರುವಾಗ ರಾಜ್ಯ ಸರ್ಕಾರ ಯಾಕೆ ಪರಿಹಾರ ಕೊಡಬೇಕು? ತಾಕತ್ತಿದ್ದರೆ ಕೇಂದ್ರದಿಂದ ಪರಿಹಾರ ಕೊಡಿಸಲಿ" ಎಂದು ಸವಾಲು ಹಾಕಿದರು.
ಬಿಜೆಪಿ ನಾಯಕರಿಗೆ ಸಾಮಾನ್ಯ ಜ್ಞಾನವಿಲ್ಲ
ಆಟೋ ಸಂಘಟನೆಗಳ ಹೆಸರಿನಲ್ಲಿ ಕೆಲವರು ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ಬಿಜೆಪಿಯ ಪ್ರೇರೇಪಿತ ನಡವಳಿಕೆ. ರಾಜ್ಯ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುವವರಿಗೆ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲ ಎಂದು ಲಕ್ಷ್ಮಣ್ ಟೀಕಿಸಿದರು. ಇಂಧನ ಸರಬರಾಜು ವಿಚಾರದಲ್ಲಿ ರಾಜ್ಯದ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.