ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ಮಧ್ಯರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಮಾನಸಿಕ ಅಸ್ವಸ್ಥನೊಬ್ಬ ರಾಕ್ಷಸನಂತೆ ಎರಗಿ, ಮನೆ ಮುಂದೆ ಮಲಗಿದ್ದ ಆರು ಜನರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹರ್ಜಪ್ಪ ಲಮಾಣಿ ಎಂಬಾತನೇ ಈ ಕಿರಾತಕ ಕೃತ್ಯ ಎಸಗಿದ ವ್ಯಕ್ತಿ. ಈತನ ದಾಳಿಯಿಂದಾಗಿ ತಾಂಡಾದ ನಿವಾಸಿಗಳಾದ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಎಂಬುವವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿದ್ರೆಯಲ್ಲಿದ್ದವರ ಮೇಲೆ 'ಸೈಕೋ' ದಾಳಿ!
ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ತಾಂಡಾದ ಜನರೆಲ್ಲಾ ಗಾಢ ನಿದ್ರೆಯಲ್ಲಿದ್ದರು. ಈ ವೇಳೆ ಏಕಾಏಕಿ ದೊಣ್ಣೆ ಹಿಡಿದು ಬಂದ ಹರ್ಜಪ್ಪ, ಮನೆ ಮುಂದೆ ಮಲಗಿದ್ದವರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಗಾಯಾಳುಗಳು ನೋವಿನಿಂದ ಚೀರಾಡತೊಡಗಿದರು. ಇವರ ಕೂಗಾಟ ಕೇಳಿ ತಾಂಡಾದ ಇತರ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಕೆಲವರ ಸ್ಥಿತಿ ಚಿಂತಾಜನಕ
ಗಂಭೀರವಾಗಿ ಗಾಯಗೊಂಡ ಆರೂ ಜನರನ್ನು ತಕ್ಷಣವೇ ಗದಗಿನ ಜಿಮ್ಸ್ (GIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೊಳಗಾದವರ ತಲೆ, ಕಣ್ಣು ಹಾಗೂ ಮುಖದ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ಇದರಲ್ಲಿ ಕೆಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಮಾನಸಿಕ ಅಸ್ವಸ್ಥ ಹರ್ಜಪ್ಪ ನಡೆಸಿದ ಈ ಭೀಕರ ದಾಳಿಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಘಟನೆಯಿಂದ ತಾಂಡಾದ ನಿವಾಸಿಗಳು ಬೆಚ್ಚಿಬಿದ್ದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.