Skip to main content
ವಿಡಿಯೋ
politics

ಬೆಂಗಳೂರು-ಮೈಸೂರು ರೈಲ್ವೆ ಸಮಸ್ಯೆಗಳಿಗೆ ಶೀಘ್ರ ಮುಕ್ತಿ: ಚನ್ನಪಟ್ಟಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ

By Bhavana Gowda
ಬೆಂಗಳೂರು-ಮೈಸೂರು ರೈಲ್ವೆ ಸಮಸ್ಯೆಗಳಿಗೆ ಶೀಘ್ರ ಮುಕ್ತಿ: ಚನ್ನಪಟ್ಟಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ

ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. "ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಅನುಭವಿ ರಾಜಕಾರಣಿಗಳು. ಇಂತಹ ಪದಬಳಕೆ ಮಾಡುವ ಮೊದಲು ಅವರು ಆತ್ಮವಿಮರ್ಷೆ ಮಾಡಿಕೊಳ್ಳಬೇಕು," ಎಂದು ಸಲಹೆ ನೀಡಿದರು.

ಚನ್ನಪಟ್ಟಣ: ಬೆಂಗಳೂರು ಮತ್ತು ಮೈಸೂರು ನಡುವಿನ ರೈಲ್ವೆ ಪ್ರಯಾಣಿಕರ ದಶಕಗಳ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಇಂದು ಚನ್ನಪಟ್ಟಣ ತಾಲ್ಲೂಕಿನ ಕೆ. ಶೆಟ್ಟಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈಲ್ವೆ ಮಾರ್ಗದ ಅಭಿವೃದ್ಧಿ ಹಾಗೂ ಉಪಚುನಾವಣೆಯ ಕುರಿತು ಪ್ರಮುಖ ವಿಷಯಗಳನ್ನು ಹಂಚಿಕೊಂಡರು.

ರೈಲ್ವೆ ಮಾರ್ಗ ಪರಿಶೀಲನೆ ಮತ್ತು ಅಭಿವೃದ್ಧಿ

ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದಲ್ಲಿ ಹಲವೆಡೆ ಎದುರಾಗಿರುವ ಲೆವೆಲ್ ಕ್ರಾಸಿಂಗ್ ಹಾಗೂ ಮೇಲ್ಸೇತುವೆ (ROB/RUB) ಸಮಸ್ಯೆಗಳ ಬಗ್ಗೆ ಸಚಿವರು ಗಮನಹರಿಸಿದ್ದಾರೆ. "ಇಂದು ನಾವು ಬೆಂಗಳೂರು-ಮೈಸೂರು ರೈಲ್ವೆ ಮಾರ್ಗವನ್ನು ಪರಿಶೀಲನೆ ಮಾಡುತ್ತಿದ್ದೇವೆ. ಕೆಲವು ಕಡೆಗಳಲ್ಲಿ ರೈಲ್ವೆ ಗೇಟ್ ಹಾಗೂ ಮೇಲ್ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳಿವೆ. ಇದನ್ನು ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತರಲು ಅವರ ಜೊತೆಯಲ್ಲೇ ಪ್ರಯಾಣ ಮಾಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದೇವೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಈ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ," ಎಂದು ಅವರು ಭರವಸೆ ನೀಡಿದರು.

ಉಪಚುನಾವಣೆ: ಮೈತ್ರಿ ಅಭ್ಯರ್ಥಿಗಳ ಗೆಲುವಿನ ವಿಶ್ವಾಸ

ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಇಂದು ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದ್ದರೂ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂಬ ವಿಶ್ವಾಸ ನನಗಿದೆ," ಎಂದರು.

ಖರ್ಗೆ ಹೇಳಿಕೆಗೆ ತಿರುಗೇಟು: ಕಾನೂನು ಕ್ರಮದ ಪ್ರಶ್ನೆ

ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. "ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಅನುಭವಿ ರಾಜಕಾರಣಿಗಳು. ಇಂತಹ ಪದಬಳಕೆ ಮಾಡುವ ಮೊದಲು ಅವರು ಆತ್ಮವಿಮರ್ಷೆ ಮಾಡಿಕೊಳ್ಳಬೇಕು," ಎಂದು ಸಲಹೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ ಸಚಿವರು, "ಇಂತಹ ಅವಹೇಳನಕಾರಿ ಪದಬಳಕೆಯ ವಿರುದ್ಧ ಇದೇ ಕಾಂಗ್ರೆಸ್ ಸರ್ಕಾರ ಕಾನೂನು ತಂದಿದೆಯಲ್ಲವೇ? ಈಗ ತಮ್ಮದೇ ಪಕ್ಷದ ನಾಯಕರ ವಿರುದ್ಧ ಆ ಕಾನೂನಿನ ಅಡಿಯಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ," ಎಂದು ವ್ಯಂಗ್ಯವಾಡಿದರು.