ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಿಬ್ಬಂದಿಗಳ ಅತಿರೇಕದ ವರ್ತನೆ ಮಿತಿಮೀರಿದೆ. ಫಾಸ್ಟ್ ಟ್ಯಾಗ್‌ನಲ್ಲಿ (Fastag) ಹಣವಿಲ್ಲ ಎಂಬ ಸಣ್ಣ ಕಾರಣಕ್ಕೆ ಯುವಕನೊಬ್ಬನ ಮೇಲೆ ಟೋಲ್ ಸಿಬ್ಬಂದಿಗಳು ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಬಳಿ ನಡೆದಿದೆ.
ನಡೆದದ್ದೇನು?
ಮಹೇಶ್ ಎಂಬ ಯುವಕ ಎರಡು ದಿನಗಳ ಹಿಂದೆ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಗಣಂಗೂರು ಟೋಲ್ ಪ್ಲಾಜಾ ತಲುಪಿದಾಗ ಕಾರಿನ ಫಾಸ್ಟ್ ಟ್ಯಾಗ್‌ನಲ್ಲಿ ಹಣ ಖಾಲಿಯಾಗಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಮಹೇಶ್, ಕಾರನ್ನು ಸ್ವಲ್ಪ ಹಿಂದಕ್ಕೆ ಪಡೆದು ಪರಿಚಯಸ್ಥರಿಗೆ ಕರೆ ಮಾಡಿ ಹಣ ಹಾಕಿಸಿಕೊಳ್ಳುವುದಾಗಿ ಸಿಬ್ಬಂದಿಗೆ ತಿಳಿಸಿದ್ದಾರೆ.
ಟೋಲ್ ಸಿಬ್ಬಂದಿಯ ಗೂಂಡಾವರ್ತನೆ
ಮಹೇಶ್ ಅವರ ಮಾತನ್ನು ಕೇಳುವ ಸೌಜನ್ಯವೂ ಇಲ್ಲದ ಸಿಬ್ಬಂದಿಗಳು, ತಕ್ಷಣವೇ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಸಿಬ್ಬಂದಿಗಳು ಮಹೇಶ್ ಅವರ ಮೊಬೈಲ್ ಕಿತ್ತುಕೊಂಡು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಕೇವಲ ಒಬ್ಬಿಬ್ಬರಲ್ಲದೆ, ಗುಂಪು ಕಟ್ಟಿಕೊಂಡು ಯುವಕನ ಮೇಲೆ ಮುಗಿಬಿದ್ದ ಸಿಬ್ಬಂದಿಗಳ ವರ್ತನೆ ಹಾದಿಹೋಕರನ್ನು ಬೆಚ್ಚಿಬೀಳಿಸಿದೆ.
ವಿಡಿಯೋ ವೈರಲ್
ಯುವಕನ ಮೇಲೆ ನಡೆದ ಈ ಮೃಗೀಯ ಹಲ್ಲೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಟೋಲ್ ಸಂಗ್ರಹಿಸುವವರು ಸಾರ್ವಜನಿಕರೊಂದಿಗೆ ವರ್ತಿಸುವ ರೀತಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, "ಇವರು ಸಿಬ್ಬಂದಿಗಳೋ ಅಥವಾ ರೌಡಿಗಳೋ?" ಎಂದು ಪ್ರಶ್ನಿಸುತ್ತಿದ್ದಾರೆ. ಬೆಂಗಳೂರು-ಮೈಸೂರು ಹೈವೆಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಸದ್ಯ ಹಲ್ಲೆಗೊಳಗಾದ ಯುವಕ ಈ ಕುರಿತು ನ್ಯಾಯಕ್ಕಾಗಿ ಆಗ್ರಹಿಸಿದ್ದು, ಪೊಲೀಸರು ಈ ಗೂಂಡಾ ಸಿಬ್ಬಂದಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.