Skip to main content
ವಿಡಿಯೋ
technology

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಪಾಸ್‌ಪೋರ್ಟ್ ಬೇಡ, ಮುಖ ತೋರಿಸಿದ್ರೆ ಸಾಕು! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸಿಸ್ಟಮ್‌

By Bhavana Gowda
ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ಮುಂದೆ ಪಾಸ್‌ಪೋರ್ಟ್ ಬೇಡ, ಮುಖ ತೋರಿಸಿದ್ರೆ ಸಾಕು! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸಿಸ್ಟಮ್‌

ಟಿಕೆಟ್ ಬುಕ್ಕಿಂಗ್ ಹಂತದಿಂದಲೇ ಈ ಪ್ರಕ್ರಿಯೆ ಆರಂಭವಾಗುವುದರಿಂದ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವುದು ಮತ್ತು ಭದ್ರತಾ ತಪಾಸಣೆ ಮುಗಿಸುವುದು ಅತ್ಯಂತ ಸುಲಭವಾಗಲಿದೆ.

ಬೆಂಗಳೂರು: ನೀವು ವಿದೇಶಕ್ಕೆ ಪ್ರಯಾಣ ಬೆಳೆಸಬೇಕೆಂದರೆ ವಿಮಾನ ನಿಲ್ದಾಣದಲ್ಲಿ ಪಾಸ್‌ಪೋರ್ಟ್ ಮತ್ತು ಬೋರ್ಡಿಂಗ್ ಪಾಸ್‌ಗಳನ್ನು ಹಿಡಿದುಕೊಂಡು ಉದ್ದನೆಯ ಸಾಲಿನಲ್ಲಿ ನಿಲ್ಲುವ ಕಾಲ ಇನ್ನು ಇತಿಹಾಸವಾಗಲಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ದೇಶದಲ್ಲೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಯಾಣಿಕರಿಗಾಗಿ ಅತ್ಯಾಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಲು ಸಜ್ಜಾಗಿದೆ.

ದೇಶದಲ್ಲೇ ಮೊದಲ ಮೈಲಿಗಲ್ಲು

ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL), ಇಂಡಿಗೋ ಏರ್‌ಲೈನ್ಸ್, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (IATA) ಸಹಯೋಗದೊಂದಿಗೆ ಈ ಹೊಸ ಪ್ರಯೋಗವನ್ನು ನಡೆಸಲಾಗಿದೆ. ಈ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಇದು ಭಾರತದ ವಾಯುಯಾನ ಕ್ಷೇತ್ರದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ.

ಏನಿದರ ವಿಶೇಷತೆ?

ಇಷ್ಟು ದಿನ 'ಡಿಜಿ ಯಾತ್ರಾ' (Digi Yatra) ಮೂಲಕ ಕೇವಲ ದೇಶೀಯ ಪ್ರಯಾಣಿಕರಿಗೆ ಮಾತ್ರ ಮುಖ ಗುರುತಿಸುವಿಕೆಯ (Face Recognition) ಮೂಲಕ ತಡೆರಹಿತ ಪ್ರಯಾಣದ ಅವಕಾಶವಿತ್ತು. ಆದರೆ ಇನ್ಮುಂದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೂ ಈ ಸೌಲಭ್ಯ ಸಿಗಲಿದೆ. ದಿನೇ ದಿನೇ ಏರುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸಮಯ ಉಳಿಸಲು ಈ 'ಸೆಲ್ಫ್-ಸೋವರಿನ್ ಐಡೆಂಟಿಟಿ’ (SSI) ತಂತ್ರಜ್ಞಾನವನ್ನು ತರಲಾಗುತ್ತಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಈ ತಂತ್ರಜ್ಞಾನವು ಪ್ರಯಾಣಿಕರ ಗುರುತನ್ನು ಮೊದಲೇ ಸುರಕ್ಷಿತವಾಗಿ ದೃಢೀಕರಿಸುತ್ತದೆ.

ಫೇಸ್ ಸ್ಕ್ಯಾನಿಂಗ್: ವಿಮಾನ ನಿಲ್ದಾಣದ ಪ್ರವೇಶ ದ್ವಾರದಿಂದ ಹಿಡಿದು ಭದ್ರತಾ ತಪಾಸಣೆ ಮತ್ತು ವಿಮಾನದ ಬೋರ್ಡಿಂಗ್‌ವರೆಗೂ ಕೇವಲ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿದರೆ ಸಾಕು.

ದಾಖಲೆಗಳ ಕಿರಿಕಿರಿ ಇಲ್ಲ: ನೀವು ಪದೇ ಪದೇ ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಪಾಸ್ ತೋರಿಸುವ ಅಗತ್ಯವಿರುವುದಿಲ್ಲ.

ಆ್ಯಪ್-ಟು-ಆ್ಯಪ್ ಸಂಪರ್ಕ: ಏರ್‌ಲೈನ್ ಆ್ಯಪ್‌ಗಳು ಮತ್ತು ವಿಮಾನ ನಿಲ್ದಾಣದ ಸರ್ವರ್‌ಗಳು ಪರಸ್ಪರ ಸಂಪರ್ಕ ಹೊಂದಿದ್ದು, ಪ್ರಯಾಣಿಕರ ವಿವರಗಳು ಸ್ವಯಂಚಾಲಿತವಾಗಿ ಪರಿಶೀಲಿಸಲ್ಪಡುತ್ತವೆ.

ಸುರಕ್ಷತೆ: ಎಸ್‌ಎಸ್‌ಐ ಮಾದರಿಯಡಿಯಲ್ಲಿ ವ್ಯಕ್ತಿಯ ಗುರುತಿನ ಮಾಹಿತಿಯು ಅತ್ಯಂತ ಸುರಕ್ಷಿತವಾಗಿ ಸಂಗ್ರಹವಾಗಿದ್ದು, ಖಾಸಗಿತನಕ್ಕೆ ಯಾವುದೇ ಧಕ್ಕೆ ಬರದಂತೆ ವಿನ್ಯಾಸಗೊಳಿಸಲಾಗಿದೆ.

ಟಿಕೆಟ್ ಬುಕ್ಕಿಂಗ್ ಹಂತದಿಂದಲೇ ಈ ಪ್ರಕ್ರಿಯೆ ಆರಂಭವಾಗುವುದರಿಂದ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವುದು ಮತ್ತು ಭದ್ರತಾ ತಪಾಸಣೆ ಮುಗಿಸುವುದು ಅತ್ಯಂತ ಸುಲಭವಾಗಲಿದೆ. ಬೆಂಗಳೂರು ವಿಮಾನ ನಿಲ್ದಾಣವು ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದ ಸ್ಮಾರ್ಟ್ ಏರ್‌ಪೋರ್ಟ್‌ಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದೆ.