ಚಿಕ್ಕಮಗಳೂರು: ಪ್ರವಾಸಕ್ಕೆಂದು ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ, ಮುಳ್ಳಯ್ಯನಗಿರಿ ಸಮೀಪದ ಮಾಣಿಕ್ಯಧಾರದ 2000 ಅಡಿ ಆಳದ ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಭಾವಿಸಲಾಗಿತ್ತಾದರೂ, ಆಕೆಯ ತಂದೆ ಪೊಲೀಸರಿಗೆ ನೀಡಿರುವ ಹೇಳಿಕೆ ಈಗ ಸಾವಿನ ಸುತ್ತ ಹಲವು ಅನುಮಾನಗಳನ್ನು ಮೂಡಿಸಿದೆ.
ಘಟನೆಯ ಹಿನ್ನೆಲೆ
ಕೇರಳ ಮೂಲದ ಶ್ರೀನಂದಾ ಏಪ್ರಿಲ್ 7ರಂದು ತನ್ನ ಕುಟುಂಬದೊಂದಿಗೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಳು. ಮಂಗಳವಾರ ಸಂಜೆ ಸುಮಾರು 5:30ರ ಸುಮಾರಿಗೆ ಮಾಣಿಕ್ಯಧಾರದ ಮೆಟ್ಟಿಲುಗಳನ್ನು ಇಳಿಯುವಾಗ ಕುಟುಂಬದವರ ಕಣ್ಣೆದುರೇ ಆಕೆ ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಪೊಲೀಸ್, ಅರಣ್ಯ ಇಲಾಖೆ ಮತ್ತು ಸ್ಥಳೀಯ ರಕ್ಷಣಾ ತಂಡಗಳು ನಡೆಸಿದ ಸತತ ಶೋಧದ ನಂತರ, ನಿನ್ನೆ (ಏಪ್ರಿಲ್ 10) ಅತ್ಯಂತ ದುರ್ಗಮವಾದ ಕಂದಕದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ತಂದೆಯ ಹೇಳಿಕೆಯಿಂದ ಮೂಡಿದ ಹೊಸ ತಿರುವು
ಬಾಲಕಿಯ ತಂದೆ ರಮೇಶ್ ಪೊಲೀಸರ ಮುಂದೆ ನೀಡಿರುವ ಹೇಳಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ. ಮಾಣಿಕ್ಯಧಾರದ ಬಳಿ ಶ್ರೀನಂದಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ, ತಂದೆ ರಮೇಶ್ ಮೊಬೈಲ್ ವಿಚಾರವಾಗಿ ಆಕೆಗೆ ಬೈದಿದ್ದರು. ಅಲ್ಲದೆ ಮೊಬೈಲ್ ಅನ್ನು ತನಗೆ ನೀಡುವಂತೆ ಗದರಿಸಿದ್ದರು ಎನ್ನಲಾಗಿದೆ. ತಂದೆ ಎಲ್ಲರ ಮುಂದೆ ಬೈದಿದ್ದರಿಂದ ಮನನೊಂದ ಶ್ರೀನಂದಾ, ಜಲಪಾತದ ಕಡೆಗೆ ಹೋಗದೆ ಪಾರ್ಕಿಂಗ್ ಸ್ಥಳದ ಕಡೆಗೆ ವಾಪಸ್ ನಡೆದಿದ್ದಳು. ಆ ನಂತರವೇ ಆಕೆ ಕಾಣೆಯಾಗಿದ್ದಳು. ತಂದೆಯ ಮಾತುಗಳಿಂದ ಬೇಸತ್ತು ಬಾಲಕಿ ಪಾರ್ಕಿಂಗ್ ಸ್ಥಳದ ಸಮೀಪದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
"ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ತಂದೆ ಬೈದಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ?" ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವು ಸುಮಾರು 2000 ಅಡಿ ಆಳದಲ್ಲಿ ಪತ್ತೆಯಾಗಿದ್ದು, ಅದನ್ನು ಮೇಲೆತ್ತುವ ಕಾರ್ಯವು ಅತ್ಯಂತ ಸವಾಲಿನಿಂದ ಕೂಡಿದೆ. ಪ್ರಸ್ತುತ ಪೊಲೀಸರು ಈ ಸಾವಿನ ಹಿಂದಿನ ನಿಗೂಢತೆಯನ್ನು ಭೇದಿಸಲು ಎಲ್ಲಾ ಆಯಾಮಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ.