ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವತಿಗೆ ಬಲವಂತವಾಗಿ ಎಚ್‌ಐವಿ ಪಾಸಿಟಿವ್ ರಕ್ತವನ್ನು ಇಂಜೆಕ್ಟ್ ಮಾಡಿದ ಮನಕಲಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿತ್ತು. ಈ ಕೃತ್ಯದಿಂದ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದ 24 ವರ್ಷದ ಯುವತಿ, ಇದೀಗ ಆತ್ಮಹತ್ಯೆಗೆ ಶರಣಾಗುವ ಮೂಲಕ ದುರಂತ ಅಂತ್ಯ ಕಂಡಿದ್ದಾಳೆ.
ನಡೆದಿದ್ದೇನು? ಪ್ರೀತಿ ದ್ವೇಷವಾದ ಕಥೆ!
ಆರೋಪಿ ಮನೋಹರ್ ಮತ್ತು ಸಂತ್ರಸ್ತ ಯುವತಿ ಹತ್ತಿರದ ಸಂಬಂಧಿಕರು. ಆರಂಭದಲ್ಲಿ ಇವರಿಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ ಮದುವೆಗೂ ಮುನ್ನ ನಡೆದ ಒಂದು ಪರೀಕ್ಷೆ ಎಲ್ಲವನ್ನೂ ಬದಲಿಸಿತು. ಮನೋಹರ್ ಪೋಷಕರಿಗೆ ಎಚ್‌ಐವಿ ಇದ್ದ ಕಾರಣ, ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆತನಿಗೆ ರಕ್ತ ಪರೀಕ್ಷೆ ಮಾಡಿಸಿದ್ದರು. ವರದಿಯಲ್ಲಿ ಮನೋಹರ್‌ನೂ ಎಚ್‌ಐವಿ ಪೀಡಿತ ಎಂಬುದು ದೃಢಪಟ್ಟಿತ್ತು. ಸೋಂಕು ತಿಳಿಯುತ್ತಿದ್ದಂತೆಯೇ ಯುವತಿ ಈ ಮದುವೆಯನ್ನು ನಿರಾಕರಿಸಿದ್ದಳು. ಇದರಿಂದ ಕೆರಳಿದ ಮನೋಹರ್ ಸೇಡಿನ ಕಿಚ್ಚಿನಿಂದ ಕಳೆದ ಮಾರ್ಚ್ 11 ರಂದು ಯುವತಿಯ ಮನೆಗೆ ನುಗ್ಗಿ ಆಕೆಗೆ ಬಲವಂತವಾಗಿ ತನ್ನ ಎಚ್‌ಐವಿ ಸೋಂಕಿತ ರಕ್ತವನ್ನೇ ಇಂಜೆಕ್ಟ್ ಮಾಡಿದ್ದ.
ಮಾನಸಿಕವಾಗಿ ಕುಸಿದಿದ್ದ ಯುವತಿ
ಘಟನೆ ನಡೆದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಯುವತಿ ಮಾತ್ರ ತನ್ನ ಜೀವನವೇ ಮುಗಿದುಹೋಯಿತು ಎಂಬ ಆಘಾತದಲ್ಲಿದ್ದಳು. ಘಟನೆ ನಡೆದ ಸುಮಾರು ಒಂದು ತಿಂಗಳ ನಂತರ (ಏಪ್ರಿಲ್ 10), ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. "ಎಚ್‌ಐವಿ ರಕ್ತವನ್ನು ಚುಚ್ಚಿದ ಪರಿಣಾಮ ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಅದೇ ಕಾರಣಕ್ಕೆ ಈ ಹೆಜ್ಜೆ ಇಟ್ಟಿರಬಹುದು," ಎಂದು ಪೋಚಾರಂ ಐಟಿ ಕಾರಿಡಾರ್ ಪೊಲೀಸರು ತಿಳಿಸಿದ್ದಾರೆ.
ರಕ್ತ ವರ್ಗಾವಣೆಯಲ್ಲೂ ನಿರ್ಲಕ್ಷ್ಯ: ಐದು ಮಕ್ಕಳಿಗೆ ಸೋಂಕು!
ಇದೇ ವೇಳೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಥಲಸ್ಸೇಮಿಯಾ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಐದು ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡುವಾಗ ಎಚ್‌ಐವಿ ಸೋಂಕಿತ ರಕ್ತವನ್ನು ನೀಡಲಾಗಿತ್ತು. 150ಕ್ಕೂ ಹೆಚ್ಚು ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಸರಿಯಾಗಿ ತಪಾಸಣೆ ನಡೆಸದ ಕಾರಣ ಮಕ್ಕಳ ಬದುಕು ಇದೀಗ ದುರಂತಕ್ಕೀಡಾಗಿದೆ.